
shimoga | ಮನೆಯ ಪಕ್ಕವೇ ನಿದ್ರೆ ಹೋದ ಅಪರಿಚಿತ ಯುವಕ… ಎಚ್ಚರಿಸಿ ಕರೆದೊಯ್ದ ಪೊಲೀಸರು…!
ಶಿವಮೊಗ್ಗ (shivamogga), ಮಾ. 18: ತಡರಾತ್ರಿ ಮನೆಯೊಂದಕ್ಕೆ ಆಗಮಿಸಿದ ಅಪರಿಚಿತ ಯುವಕನೋರ್ವ ಒಣಗಲು ಹಾಕಿದ್ದ ಟವೆಲ್, ಪಂಚೆ ಕದ್ದು ಸದರಿ ಮನೆಯ ಪಕ್ಕದ ಕಟ್ಟೆಯ ಮೇಲೆಯೇ ನಿದ್ರೆ ಹೋಗಿದ್ದು, ಮಂಗಳವಾರ ಮುಂಜಾನೆ ಸ್ಥಳಕ್ಕಾಗಮಿಸಿದ ವಿನೋಬನಗರ ಠಾಣೆ ಪೊಲೀಸರು ಯುವಕನನ್ನು ನಿದ್ರೆಯಿಂದ ಎಚ್ಚರಿಸಿ, ಪೊಲೀಸ್ ಠಾಣೆಗೆ ಕರೆದೊಯ್ದ ಕುತೂಹಲಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಹೊರವಲಯ ಸೋಮಿನಕೊಪ್ಪದ ಟೀಚರ್ಸ್ ಕಾಲೋನಿಯ ಕುಮಾರ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಅಪರಿಚಿತ ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈತನ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಏನೀದು ಘಟನೆ? : ತಡರಾತ್ರಿ ಕುಮಾರ್ ಅವರ ಮನೆ ಮಹಡಿಯಲ್ಲಿರುವ ಕೊಠಡಿಗೆ ಯುವಕ ಆಗಮಿಸಿದ್ದಾನೆ. ಕೊಠಡಿಯ ಬಾಗಿಲು ತೆರೆದು ಅಲ್ಲಿದ್ದ ಬೀರು ಪರಿಶೀಲಿಸಿದ್ದಾನೆ. ಬೀರುವಿನಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ದೊರಕಿಲ್ಲ. ನಂತರ ಮಹಡಿ ಮೇಲೆ ಒಣಗಲು ಹಾಕಿದ್ದ ಟವೆಲ್, ಪಂಚೆ ಸೇರಿದಂತೆ ಕೆಲ ಬಟ್ಟೆಗಳನ್ನು ತಂದಿದ್ದಾನೆ.
ಕುಮಾರ್ ಅವರ ಮನೆಗೆ ಹೊಂದಿಕೊಂಡಿರುವ ಬಾರ್ ಕಟ್ಟಡದ ಕಟ್ಟೆ ಮೇಲೆ ಟವೆಲ್, ಪಂಚೆ ಹಾಸಿಕೊಂಡು ನಿದ್ರೆ ಹೋಗಿದ್ದಾನೆ. ಮಂಗಳವಾರ ಮುಂಜಾನೆ ಕುಮಾರ್ ಅವರು ಮನೆಯ ಮೇಲ್ಭಾಗದಲ್ಲಿ ಒಣಗಲು ಹಾಕಿದ್ದ ಬಟ್ಟೆ ತರಲು ಹೋಗಿದ್ದಾರೆ. ಈ ವೇಳೆ ಕೊಠಡಿಯ ಬಾಗಿಲು ಹಾಗೂ ಬೀರುವಿನ ಬಾಗಿಲು ತೆರೆದಿರುವುದು ಬೆಳಕಿಗೆ ಬಂದಿದೆ.
ಸುತ್ತಮುತ್ತ ಪರಿಶೀಲಿಸಿದಾಗ ಒಣಗಲು ಹಾಕಿದ್ದ ಟವೆಲ್, ಪಂಚೆ ಮತ್ತೀತರ ಬಟ್ಟೆಗಳನ್ನು ನೆಲಕ್ಕೆ ಹಾಸಿಕೊಂಡು ಯುವಕನೋರ್ವ ಮಲಗಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ 112 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ವಿನೋಬನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಸುನೀಲ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ನಿದ್ರಿಸುತ್ತಿದ್ದವನನ್ನು ಎಚ್ಚರಿಸಿ ವಿಚಾರಿಸಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಯುವಕನ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
shimoga : Upon learning of the matter, Vinobanagar Police Station Sub-Inspector Sunil and his staff reached the spot. They woke up the sleeping man and questioned him. Later, they took him to the police station. More details about the young man are yet to be released. #shimoga, #shivamogga, #shimoganews, #shivamogganews, #shimoganewsupdate, #ಶಿವಮೊಗ್ಗ,