ಶಿವಮೊಗ್ಗ (shivamogga), ಡಿಸೆಂಬರ್ 6: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ವೇಳೆ, ರಸ್ತೆ ಮೇಲೆ ಬಿದ್ದ ಬೈಕೊಂದರ ಸವಾರ ಹಾಗೂ ಹಿಂಬದಿ ಸವಾರನ ಮೇಲೆಯೇ ಹಿಂಬದಿಯಿಂದ ಆಗಮಿಸಿದ ವಾಹನವೊಂದು ಹರಿದು ಹೋದ ಪರಿಣಾಮ, ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು – ಹಾರನಹಳ್ಳಿ ಮಾರ್ಗಮಧ್ಯೆ ಡಿಸೆಂಬರ್ 5 ರ ಸಂಜೆ ಸಂಭವಿಸಿದೆ.
ಮಲ್ಲಾಪುರ ಗ್ರಾಮದ ನಿವಾಸಿಗಳಾದ ಆಕೀಫ್ (25) ಹಾಗೂ ಚಾಂದ್ ಪೀರ್ (18) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರಿಬ್ಬರು ಬೈಕ್ ನಲ್ಲಿ ತೆರಳುವಾಗ, ಮತ್ತೊಂದು ಬೈಕ್ ನೊಂದಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಇವರಿಬ್ಬರು ಬೈಕ್ ನಿಂದ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಆಗಮಿಸಿದ ವಾಹನ ಇವರ ಮೇಲೆಯೇ ಹರಿದು ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು, ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shivamogga, December 6: Two people on a bike died in a road accident on the Ayanur-Haranahalli route in Shivamogga taluk on the evening of December 5.

