shimoga news | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಅಣಕು ಪ್ರದರ್ಶನ

ಶಿವಮೊಗ್ಗ, ಜೂನ್ 5 : ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು 6/6/2026 ರ ಸಂಜೆ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಮಾಕ್ ಡ್ರಿಲ್’ (ಅಣಕು ಪ್ರದರ್ಶನ) ಯಶಸ್ವಿಯಾಗಿ ಜರುಗಿತು.
2026 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆಯನ್ವಯ ಜಿಲ್ಲಾ ಮಟ್ಟದಲ್ಲಿ ಇಂದು ಈ ಪ್ರದರ್ಶನವನ್ನು‌ ಯಶಸ್ವಿಯಾಗಿ ಕೈಗೊಳ್ಳಲಾಯಿತು.
ಕಾರ್ಯಾಚರಣೆ ನಂತರ ೨ ನಿಮಿಷಗಳ ಸೈರನ್ ಮೊಳಗಿಸಲಾಯಿತು.‌ ವಿವಿಧ ಇಲಾಖೆಗಳ ಯಶಸ್ವಿ ಸಮನ್ವಯ ಈ ಬೃಹತ್ ಅಣಕು ಪ್ರದರ್ಶನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ನಾಗರಿಕ ರಕ್ಷಣಾ ಸ್ವಯಂಸೇವಕರು, ಆರೋಗ್ಯ ಇಲಾಖೆ, ಎನ್‌ಸಿಸಿ,  ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಹಾಗೂ ಕೆಎಸ್ಆರ್‌ಟಿಸಿ ಸಿಬ್ಬಂದಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಿದ್ಧತೆಯನ್ನು ಪ್ರದರ್ಶಿಸಿದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ನಿಖಿಲ್ ಬಿ‌  ಅವರ ನೇತೃತ್ವದಲ್ಲಿ ಇಲಾಖೆಗಳ ನಡುವಿನ ಸಮನ್ವಯತೆಯನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಯಿತು.
ಸಾರ್ವಜನಿಕರಿಗೆ ಧೈರ್ಯ ತುಂಬಿದ ಅಧಿಕಾರಿಗಳು :
“ಇದು ಕೇವಲ ದೇಶದ ಭದ್ರತಾ ಮುನ್ನೆಚ್ಚರಿಕೆಯ ತರಬೇತಿ ಪ್ರಕ್ರಿಯೆಯಾಗಿದೆ. ಇಂತಹ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರು ಭಯಭೀತರಾಗದೆ, ಧೈರ್ಯದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಮತ್ತು ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಅಣಕು ಪ್ರದರ್ಶನ ಆಯೋಜಿಸಲಾಗಿದೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು‌ ಹಾಜರಿದ್ದರು.
ಅಣಕು ಪ್ರದರ್ಶನದ ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ‌ ಮಾಕ್ ಡ್ರಿಲ್ ಉದ್ದೇಶವಾಗಿದೆ. ಎಲ್ಲ ನೌಕರರು ವಾಸ್ತವದಂತೆ  ಪ್ರದರ್ಶಿಸಿದ್ದೀರಿ. ಇಲಾಖೆಗಳ ಸಮನ್ವಯತೆ  ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಭಾಗವಹಿಸಿದ ಎಲ್ಲರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ‌ನಿಖಿಲ್ ಬಿ‌‌ ಮಾತನಾಡಿ ತುರ್ತು ಪರಿಸ್ಥಿತಿ, ವಿಪತ್ತು ಎದುರಾದಾಗ ಇಲಾಖೆಗಳ ಸನ್ನದ್ದತೆ ಮತ್ತು ಸಾರ್ವಜನಿಕರ ಸಹಕಾರ ಸಮನ್ವಯತೆ ಅಗತ್ಯವಾಗಿದ್ದು, ಅತ್ಯಂತ ವಾಸ್ತವವಾಗಿ ಅಣಕು ಪ್ರದರ್ಶನ ಮಾಡಲಾಗಿದ್ದು, ಪ್ರದರ್ಶನದಲ್ಲಿ ಪೊಲೀಸ್, ಗಥಹ ರಕ್ಷಕ, ಎನ್ ಸಿ ಸಿ ಸೇರಿದಂತೆ ೩೦೦ ಜನರು ಪಾಲ್ಗೊಂಡಿದ್ದು ಸಹಕರಿಸಿದ ಎಲ್ಲ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರಿಗೆ ವಂದನೆ ತಿಳಿಸಿದರು. ಹಾಗೂ ಗೃಹ ರಕ್ಷಕ ದಳದ ಕಮಾಂಡೆಂಟ್ ಚೇತನ್ ರವರು ಅಣಕು ಪ್ರದರ್ಶನ ಯಶಸ್ವಿಗೊಳಿಸಿದ ಸರ್ವರಿಗೆ ವಂದಿಸಿದರು.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *