shimoga news | ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಅಬ್ಬಲಗೆರೆ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳ ಗೋಳು ಆಲಿಸುವುದೆ ಜಿಲ್ಲಾಡಳಿತ?

Abbalagere Gram Panchayat ಗ್ರಾಪಂ ಅಬ್ಬಲಗೆರೆಗೆ
ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಆಗಸ್ಟ್ 06: ಶಿವಮೊಗ್ಗ ನಗರದ ಭಾಗವಾಗಿರುವ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯು, ಇಡೀ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯ್ತಿ ಆಗಿದೆ. ಸದರಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ, ವಸತಿ ಬಡಾವಣೆಗಳಿವೆ. ಸಾಕಷ್ಟು ವ್ಯಾಪ್ತಿ, ವಿಸ್ತೀರ್ಣ, ಜನಸಂಖ್ಯೆಬಾಹುಳ್ಯ ಹೊಂದಿದೆ.

ಆದರೆ ‘ಆನೆ ಹೊಟ್ಟೆಗೆ ಅರೆಪಾವು ಮಜ್ಜಿಗೆ…!’ ಎಂಬ ಮಾತಿನಂತೆ, ಜನಸಂಖ್ಯೆ – ವ್ಯಾಪ್ತಿ ವಿಸ್ತೀರ್ಣಕ್ಕೆ ಅನುಗುಣವಾಗಿ ಗ್ರಾಪಂ ಆಡಳಿತದಲ್ಲಿ ಸೌಲಭ್ಯಗಳಿಲ್ಲವಾಗಿದೆ. ಇದರ ನೇರ ಪರಿಣಾಮ ಜನಸಾಮಾನ್ಯರು ಎದುರಿಸುವಂತಾಗಿದ್ದು, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.

ಅಬ್ಬಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 7 ಹಳ್ಳಿಗಳು ಸೇರಿದಂತೆ ಸುಮಾರು 30 ಕ್ಕೂ ಅಧಿಕ ಜನವಸತಿ ಬಡಾವಣೆಗಳಿವೆ! ವರ್ಷದಿಂದ ವರ್ಷಕ್ಕೆ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲ ಬಡಾವಣೆಗಳು ಸ್ಯಾಟಲೈಟ್ ಟೌನ್ ಗಳ ರೀತಿ ಅಭಿವೃದ್ದಿ ಹೊಂದುತ್ತಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಶಿವಮೊಗ್ಗ ಪಾಲಿಕೆಯ ಎರಡ್ಮೂರು ವಾರ್ಡ್ ಗಳ ವ್ಯಾಪ್ತಿ, ವಿಸ್ತೀರ್ಣವನ್ನು ಅಬ್ಬಲಗೆರೆ ಗ್ರಾಪಂ ಆಡಳಿತವೊಂದೆ ಒಳಗೊಂಡಿದೆ.

ಬಡಾವಣೆಗಳ ಸಂಕಷ್ಟ : ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂ ಅಧೀನದ ಬಡಾವಣೆಗಳ ಪರಿಣಾಮಕಾರಿ ನಿರ್ವಹಣೆ, ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ನಾಗರೀಕರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲು ಹಾಗೂ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಅನುದಾನ ಮತ್ತು ಇತರೆ ಸಂಪನ್ಮೂಲಗಳ ಕೊರತೆ ಎದುರಾಗುತ್ತಿದೆ.

ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ, ಹೊಸ ರಸ್ತೆ ನಿರ್ಮಾಣ – ದುರಸ್ತಿ, ಬೀದಿ ದೀಪ, ಸ್ವಚ್ಛತೆ, ಉದ್ಯಾನವನಗಳ ಅಭಿವೃದ್ದಿ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತುಹಲವು ಮೂಲಸೌಕರ್ಯ ವ್ಯವಸ್ಥೆಗಳಿಗೆ ಅನುದಾನ ಹೊಂದಿಸುವುದು ಗ್ರಾಪಂ ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ.

ಬೇಡಿಕೆಗಳೇನು? : ಪ್ರತಿಯೊಂದು ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆಯಿದೆ. ಯುಜಿಡಿ ಸಮಸ್ಯೆ ಎದುರಾದಾಗ ಪಾಲಿಕೆ ಆಡಳಿತದ ಮೊರೆ ಹೋಗಬೇಕಾಗಿದ್ದು, ನಾಗರಿಕರಿಗೆ ಆರ್ಥಿಕ ಹೊರೆ ಎದುರಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಹಲವು ದಿನಗಳೇ ಬೇಕಾಗುತ್ತದೆ ಎಂಬುವುದು ಹಲವು ಬಡಾವಣೆಗಳ ನಾಗರೀಕರ ಆರೋಪವಾಗಿದೆ.

ಕಸ ಸಂಗ್ರಹಣೆಯ ವಾಹನವು, ಹಲವು ಬಡಾಣೆಗಳಿಗೆ ದಿನನಿತ್ಯ ಆಗಮಿಸುವುದಿಲ್ಲ. ವಾರಕ್ಕೆ ಎರಡು, ಮೂರು ದಿನಗಳಿಗೊಮ್ಮೆ ಆಗಮಿಸುತ್ತಿದೆ.  ಇದರಿಂದ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಕಸ ಸಂಗ್ರಹಣೆಗೆ ಮತ್ತೊಂದು ವಾಹನದ ಅಗತ್ಯವಿದೆ ಎಂದು ನಾಗರಿಕರು ತಿಳಿಸುತ್ತಾರೆ.

ರಸ್ತೆಗಳ ಗುಂಡಿ – ಗೊಟರು ಬಿದ್ದು ವರ್ಷಗಳೇ ಉರುಳಿದರೂ ಮುಚ್ಚುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಚರಂಡಿಗಳ ಸ್ವಚ್ಛತೆಯಂತೂ ವರ್ಷಗಳೇ ಉರುಳಿದರೂ ಆಗುವುದಿಲ್ಲ. ಹೊಸ ಅಭಿವೃದ್ದಿ ಕೆಲಸಗಳಂತೂ ಇಲ್ಲವೇ ಇಲ್ಲ ಎಂದು ಬಡಾವಣೆಗಳ ನಿವಾಸಿಗಳು ದೂರುತ್ತಾರೆ.

ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ, ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅಬ್ಬಲಗೆರೆ ಗ್ರಾಪಂಗೆ ಕಾಯಕಲ್ಪದ ಅವಶ್ಯಕತೆಯಿದೆ. ಜನಸಂಖ್ಯೆ – ವಿಸ್ತೀರ್ಣಕ್ಕೆ ಅನುಗುಣವಾಗಿ ಆಡಳಿತದಿಂದ ಅನುದಾನ, ಸೌಲಭ್ಯಗಳು ಹಂಚಿಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಜಿಪಂ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ತಾಪಂ ಇಓ ಪರಮೇಶ್ವರ್ ಗಮನಿಸಲಿ?

*** ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಭಾರೀ ಸಂಖ್ಯೆಯ ಬಡಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಯುಜಿಡಿಗೆ ಸಂಬಂಧಿಸಿದ ಸಕ್ಕಿಂಗ್ ವಾಹನ ಹಾಗೂ ಕಸ ಸಂಗ್ರಹಣೆಗೆ ಮತ್ತೊಂದು ವಾಹನದ ಅಗತ್ಯವಿದ್ದು, ಈ ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ (ಇಓ) ಪರಮೇಶ್ವರ್ ಅವರು ತಿಳಿಸಿದ್ದರು. ಆದರೆ ವರ್ಷ ಉರುಳಿದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ತಕ್ಷಣವೇ ಇಓ ಅವರು ಈ ಸಂಬಂಧ ಅಗತ್ಯ ಗಮನಹರಿಸಿ, ಅಬ್ಬಲಗೆರೆ ಗ್ರಾಪಂ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.

ಪಾಲಿಕೆ ಸೇರ್ಪಡೆಯೂ ಆಗುತ್ತಿಲ್ಲ..!

*** ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂ ಅಧೀನದ ಹಲವು ಬಡಾವಣೆಗಳ ನಾಗರಿಕರು, ತಮ್ಮ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಜನಪ್ರತಿನಿಧಿಗಳು ಕೂಡ ನಾಗರಿಕರ ಬೇಡಿಕೆಗೆ ಸ್ಪಂದಿಸುವ ಕಿಂಚಿತ್ತೂ ಕಾರ್ಯ ನಡೆಸುತ್ತಿಲ್ಲವೆಂದು ಕೆಲ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಬೇಡಿಕೆಗಳ ಈಡೇರಿಕೆಗೆ ಗಮನಹರಿಸುವರೆ ಅಧಿಕಾರಿಗಳು?
  • ಪ್ರತ್ಯೇಕ ಯುಜಿಡಿ ವಾಹನ, ಸಿಬ್ಬಂದಿಗಳ ವ್ಯವಸ್ಥೆ
  • ಮನೆ ಮನೆ ಕಸ ಸಂಗ್ರಹಣೆಗೆ ಮತ್ತೊಂದು ವಾಹನ
  • ಗ್ರಾಪಂನಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ
  • ಪ್ರತ್ಯೇಕ ಪೌರ ಕಾರ್ಮಿಕರ ನೇಮಕ
  • ಬಡಾವಣೆಗಳಿಗೆ ಜಲ ಮಂಡಳಿಯಿಂದ ಕುಡಿಯುವ ನೀರು ಪೂರೈಕೆ
  • ರಸ್ತೆ ನಿರ್ಮಾಣ, ದುರಸ್ತಿಗೆ ಪ್ರತ್ಯೇಕ ಅನುದಾನ
  • ಪಾಲಿಕೆ ವ್ಯಾಪ್ತಿಗೆ ಬಡಾವಣೆಗಳ ಸೇರ್ಪಡೆಗೆ ಕ್ರಮ

Is the district administration listening to the grievances of the residents of the settlements under the jurisdiction of Abbalagere, the largest gram panchayat in Shivamogga district?
Shivamogga, August 06: Abbalagere Gram Panchayat, which is part of Shivamogga city, is the largest gram panchayat in the entire district. The said gram panchayat has not only rural areas but also residential settlements. It has a sufficient scope, area and population. But as the saying goes, ‘An elephant’s stomach needs half a pav of buttermilk…!’, there are no facilities in the gram panchayat administration according to the population and area. The direct result of this is that the common people are facing hardships and are being punished for a mistake that is not theirs.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *