shimoga news | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರ ಆಯ್ಕೆ : ಘಟಾನುಘಟಿ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ ಸಿಎಂ ಆದೇಶ!

ಶಿವಮೊಗ್ಗ (shivamogga), ಅಕ್ಟೋಬರ್ 03: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಎಂಬಂತೆ ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತ, ಯುವ ಮುಖಂಡ ಸಿ ಜಿ ಮಧುಸೂದನ್ ಗೆ ಅವಕಾಶ ಕಲ್ಪಿಸಲಾಗಿದೆ. ಇದು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಘಟಾನುಘಟಿ ನಾಯಕರಿಗೆ ಶಾಕ್ ಅನುಭವ ಉಂಟು ಮಾಡಿದೆ!

ಅಕ್ಟೋಬರ್ 03 ರಂದು ಸಿ ಜಿ ಮಧುಸೂದನ್ ಅವರು, ವಿನೋಬನಗರದ ಪ್ರಾಧಿಕಾರದ ಕಚೇರಿಯಲ್ಲಿ ವಿಧ್ಯುಕ್ತವಾಗಿ ಅಧ್ಯಕ್ಷ ಸ್ಥಾನದ ಕಾರ್ಯಭಾರ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಿಂದ ಭರ್ಜರಿ ಮೆರವಣಿಗೆ ಕೂಡ ನಡೆಸಿದ್ದಾರೆ.

ಅಚ್ಚರಿ ಬೆಳವಣಿಗೆ: ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಹೆಚ್ ಎಸ್ ಸುಂದರೇಶ್ ಅವರ ಅಧಿಕಾರಾವಧಿ ಅಂತ್ಯದ ಸುಳಿವು ಅರಿತಿದ್ದ ಹಲವು ನಾಯಕರು, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಲಾಬಿ ನಡೆಸಿದ್ದರು. ಬಹುತೇಕ ಹಿರಿಯ ನಾಯಕರಲ್ಲಿ ಓರ್ವರಿಗೆ ಅಧ್ಯಕ್ಷ ಸ್ಥಾನ ನಿಶ್ಚಿತ ಎಂದೇ ಹೇಳಲಾಗುತ್ತಿತ್ತು.

ಈ ನಡುವೆ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಅವರು ಉರುಳಿಸಿದ ದಾಳ ಹಾಗೂ ಕಾಂಗ್ರೆಸ್ ಸೇವಾದಳ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ಗುಪ್ತ ಕಾರ್ಯತಂತ್ರ ಆಕಾಂಕ್ಷಿಗಳ ಎಲ್ಲ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳೇಯದಿಂದ ಕೇಳಿಬರಲಾರಂಭಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೇರಲು ಯಾವುದೇ ಪ್ರಯತ್ನವೇ ನಡೆಸದ, ಆ ನಿಟ್ಟಿನಲ್ಲಿ ಕನಸೂ ಕಾಣದಿದ್ದ ಸಿ ಜಿ ಮಧುಸೂದನ್ ರ ಹೆಸರನ್ನು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ರವಾನಿಸಲಾಗಿತ್ತು. ಮಧುಸೂದನ್ ಪರ ಲಾಬಿ ನಡೆಸಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಅವರು, ಗುಪ್ತಚರ ಮೂಲಗಳಿಂದ ಮಧುಸೂದನ್ ಕಾರ್ಯ ಚಟುವಟಿಕೆಯ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಸಕಾರಾತ್ಮಕ ವರದಿಗಳ ಹಿನ್ನೆಲೆಯಲ್ಲಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಮಧುಸೂದನ್ ಗೆ  ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟುವ ನಿರ್ಧಾರ ಕೈಗೊಂಡಿದ್ದರು. ಅದಿಕೃತ ಆದೇಶ ಕೂಡ ಹೊರಡಿಸಿದ್ದರು ಎಂದು ಹೇಳಲಾಗುತ್ತಿದೆ.

ಶಾಕ್ : ಸಿಎಂ ಡಿ ಕೆ ಶಿವಕುಮಾರ್ ಅವರ ಅಚ್ಚರಿಯ ಆಯ್ಕೆಯು, ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಸ್ಪರ್ಧಾಕಾಂಕ್ಷಿಗಳಿಗೆ ಅಕ್ಷರಶಃ ಶಾಕ್ ಅನುಭವ ಉಂಟು ಮಾಡಿದೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ. ಕೆಲ ಆಕಾಂಕ್ಷಿಗಳು ಹಿರಿಯ ನಾಯಕರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಗೂ ಆಪ್ತರ ಸಲಹೆಯಂತೆ, ಸರ್ಕಾರದಿಂದ ಅದಿಕೃತ ಆದೇಶ ಹೊರ ಬಿದ್ದ ಕೆಲ ನಿಮಿಷಗಳಲ್ಲಿಯೇ ಪ್ರಾಧಿಕಾರದ ಕಚೇರಿಗೆ ಆಗಮಿಸಿದ ಸಿ ಜಿ ಮಧುಸೂದನ್ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸುವ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಸಿಎಂ ಡಿ ಕೆ ಶಿವಕುಮಾರ್ ಅವರ ಆಯ್ಕೆಯು ಕೆಲ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇನ್ನೊಂದೆಡೆ, ಸಾಮಾನ್ಯ ಯುವ ಕಾರ್ಯಕರ್ತನಿಗೆ ಉನ್ನತ ಹುದ್ದೆ ಕಲ್ಪಿಸಿದ ಸಿಎಂ ಕ್ರಮ, ಪಕ್ಷದ ತಳಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Shivamogga, October 3: In a surprise move, C.G. Madhusudan—a Congress party worker and youth leader—has been appointed as the Chairman of the Shivamogga-Bhadravathi Urban Development Authority. This decision has come as a shock to the prominent leaders who had been eyeing the post.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *