ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 03: ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಹಲವು ಆಡಳಿತಾತ್ಮಕ ವಿಷಯಗಳು, ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಲಕ್ಷಾಂತರ ನಾಗರೀಕರಿಗೆ ಅನುಕೂಲಕರವಾದ ಯೋಜನೆಗಳ ಅನುಷ್ಠಾನದ ಕುರಿತಂತೆ ಆಡಳಿತಗಾರರು ದಿವ್ಯ ನಿರ್ಲಕ್ಷ್ಯ ಧೋರಣೆ ತಳೆದಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ! ವಿವರಗಳು ಈ ಕೆಳಕಂಡಂತಿವೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ :
1995 ರಲ್ಲಿ ಅಂದಿನ ನಗರಸಭೆ ಆಡಳಿತ ಅವಧಿಯಲ್ಲಿ, ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ಇದಾಗಿ ಬರೋಬ್ಬರಿ ಸರಿಸುಮಾರು 30 ವರ್ಷವಾಗುತ್ತಿದೆ. ಆದರೆ ಇಲ್ಲಿಯವರೆಗೂ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ನಗರದ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಿಸಬೇಕು. ವಾರ್ಡ್ ಗಳ ಸಂಖ್ಯೆ ಹೆಚ್ಚಿಸಬೇಕೆಂಬ ಬೇಡಿಗಳು ಕಾರ್ಯಗತಗೊಂಡಿಲ್ಲ. ಈ ಹಿಂದೆ ಆರಂಭಗೊಂಡಿದ್ದ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ.
ಇದರಿಂದ ನಗರದಂಚಿನಲ್ಲಿರುವ ಗ್ರಾಮ ಪಂಚಾಯ್ತಿ ಅಧೀನದ ಬಡಾವಣೆಗಳ ನಿವಾಸಿಗಳು ನಾನಾ ತೊಂದರೆ ಎದುರಿಸುವಂತಾಗಿದೆ. ನಗರವು ಕೂಡ ಅಸ್ತವ್ಯಸ್ತವಾಗಿ ಬೆಳೆವಣಿಗೆಯಾಗುವಂತಾಗಿದೆ.ಈ ಕಾರಣದಿಂದ ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಹಾಲಿಯಿರುವ 35 ವಾರ್ಡ್ ಗಳನ್ನು ಕನಿಷ್ಠ 50 ರಿಂದ 60 ವಾರ್ಡ್ ರಚನೆ ಮಾಡಬೇಕಾಗಿದೆ.
ಭದ್ರಾವತಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ :
ಬಡ – ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಹಾಲಿ ಭದ್ರಾವತಿ ನಗರದಲ್ಲಿರುವ ಸರ್ಕಾರಿ ಐಟಿಐ ಕೇಂದ್ರದಲ್ಲಿಯೇ ಎಂಜಿನಿಯರಿಂಗ್ ಕಾಲೇಜ್ ಆರಂಭಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯವಿದೆ.
ಆದರೆ ಖಾಸಗಿ ಲಾಬಿ ಸೇರಿದಂತೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಇದರಿಂದ ಬಡ – ಮಧ್ಯಮ ವರ್ಗದ ಎಂಜಿನಿಯರ್ ವಿದ್ಯಾಭ್ಯಾಸ ಮಾಡುವ ಆಕಾಂಕ್ಷಿಗಳು ದುಬಾರಿ ಹಣ ತೆತ್ತು ಖಾಸಗಿ ಕಾಲೇಜ್ ಗಳತ್ತ ಮುಖ ಮಾಡುವಂತಾಗಿದೆ.
ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ :
ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ನಗರಗಳಲ್ಲಿ ಶಿವಮೊಗ್ಗವೂ ಕೂಡ ಒಂದಾಗಿದೆ. ಹಾಗೆಯೇ ಕೋಮು ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿದೆ. ಆದರೆ ಜನಸಂಖ್ಯೆ, ನಗರದ ಬೆಳವಣಿಗೆ, ಅಪರಾಧ ಕೃತ್ಯಗಳಿಗೆ ಅನುಗುಣವಾಗಿ ಪೊಲೀಸ್ ಬಲವಿಲ್ಲವಾಗಿದೆ. ಇದು ಕಾನೂನು – ಸುವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.
ಈ ಕಾರಣದಿಂದ ಶಿವಮೊಗ್ಗ – ಭದ್ರಾವತಿ ನಗರಗಳನ್ನೊಳಗೊಂಡಂತೆ, ಪೊಲೀಸ್ ಕಮೀಷನರೇಟ್ ಸ್ಥಾಪಿಸಬೇಕೆಂಬ ಬೇಡಿಕೆ ಕಳೆದ ಹಲವು ವರ್ಷಗಳಿಂದಿದೆ. ಎಲ್ಲ ಅರ್ಹತೆ ಹೊಂದಿದ್ದರೂ ಕಮಿಷನರೇಟ್ ಸ್ಥಾಪನೆಯಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿಕೊಂಡು ಬರಲಾಗುತ್ತಿದೆ.
ಇದರ ಜೊತೆಗೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಯ ಬೇಡಿಕೆಯಿದೆ. ಆದರೆ ಕಳೆದ ಹಲವು ವರ್ಷಗಳಿಂದ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಯಾಗಿಲ್ಲ,. ಜೊತೆಗೆ ಶಿವಮೊಗ್ಗ ನಗರ ಪೊಲೀಸ್ ಠಾಣೆಗಳ ಸರಹದ್ದು ಪರಿಷ್ಕರಣೆಯೂ ಆಗಿಲ್ಲ.
ನೂತನ ತಾಲೂಕು ಕೇಂದ್ರಗಳ ರಚನೆ :
ಜನಸಂಖ್ಯೆ, ಪ್ರದೇಶಗಳ ಬೆಳವಣಿಗೆಗೆ ಅನುಗುಣವಾಗಿ ಹೊಸ ತಾಲೂಕುಗಳ ರಚನೆ ಮಾಡಲಾಗುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಯವರೇ ಸಿಎಂ, ಡಿಸಿಎಂ, ಕಂದಾಯ ಸಚಿವರು ಸೇರಿದಂತೆ ಸರ್ಕಾರದ ಹಂತದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದರೂ ಅದೆಷ್ಟೊ ದಶಕಗಳಿಂದ ಯಾವುದೇ ಹೊಸ ತಾಲೂಕು ಕೇಂದ್ರಗಳ ರಚನೆಯೇ ಆಗಿಲ್ಲ!
ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ತಾಲೂಕು ಕೇಂದ್ರಗಳ ರಚನೆ, ಭದ್ರಾವತಿಯಲ್ಲಿ ಹೊಳೆಹೊನ್ನೂರು, ಶಿಕಾರಿಪುರದಲ್ಲಿ ಶಿರಾಳಕೊಪ್ಪ, ಸೊರಬದಲ್ಲಿ ಆನವಟ್ಟಿ ತಾಲೂಕು ಕೇಂದ್ರಗಳ ರಚನೆಯ ಬೇಡಿಕೆಯಿದೆ. ದಶಕಗಳೇ ಕಳೆದರೂ ಈ ಬೇಡಿಕೆ ಕಾರ್ಯರೂಪಕ್ಕೆ ಬಂದಿಲ್ಲವಾಗಿದೆ.
ಶಿವಮೊಗ್ಗ ನಗರದ ಕುಡಿಯುವ ನೀರು ವ್ಯವಸ್ಥೆ :
ಶಿವಮೊಗ್ಗ ನಗರದ ಜನಸಂಖ್ಯೆಗೆ ಅನುಗುಣವಾಗಿ ತುಂಗಾ ಜಲಾಶಯದಿಂದ ಹೆಚ್ಚುವರಿ ನೀರು ಪೂರೈಕೆಯ ತುರ್ತು ಅಗತ್ಯವಿದೆ. ಗಾಜನೂರು ಡ್ಯಾಂ ಬಳಿ ಹೊಸ ನೀರು ಶುದ್ದೀಕರಣ ಘಟಕ ಸ್ಥಾಪನೆ ಯೋಜನೆ ಇಲ್ಲಿಯವರೆಗೂ ಅನುಷ್ಠಾನವಾಗಿಲ್ಲ. ಇದರಿಂದ ನಾಗರಿಕರ ಬೇಡಿಕೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.
24*7 ಯೋಜನೆ ಅನುಷ್ಠಾನಗೊಂಡರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನಗರದ ಹೊರವಲಯದ ಪ್ರದೇಶಗಳಿಗೆ ತುಂಗಾ ನದಿ ನೀರು ಪೂರೈಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಯ ಯೋಜನೆ ಅನುಷ್ಠಾನಕ್ಕೆ ಆದ್ಯ ಗಮನಹರಿಸಬೇಕಾಗಿದೆ.
ಶಿವಮೊಗ್ಗ ಸರ್ಕಾರಿ ಸಿಟಿ ಬಸ್ ಸೇವೆ :
ಶಿವಮೊಗ್ಗ ನಗರದ ಬೆಳವಣಿಗೆಗೆ ಅನುಗುಣವಾಗಿ ನಗರ ಸಾರಿಗೆ ವ್ಯವಸ್ಥೆ ಬಲವರ್ಧನೆಯಾಗಿಲ್ಲ. ಅತ್ಯಂತ ಕಳಪೆಯಾಗಿದೆ. ಈ ಹಿಂದೆ ಜೆನ್ ನರ್ಮ್ ಯೋಜನೆಯಡಿ ಶಿವಮೊಗ್ಗ ನಗರಕ್ಕೆ 65 ಸರ್ಕಾರಿ ಸಿಟಿ ಬಸ್ ಗಳು ಮಂಜೂರಾಗಿದ್ದವು. ಸಿಟಿ ಬಸ್ ಗಳಿಗೆ ಪ್ರತ್ಯೇಕ ಬಸ್ ಸ್ಟ್ಯಾಂಡ್, ಡಿಪೋ, ವರ್ಕ್ ಶಾಪ್ ನಿರ್ಮಾಣಕ್ಕೂ ಅನುದಾನ ಮಂಜೂರಾಗಿತ್ತು. ಅದರಂತೆ ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೂ ಚಾಲನೆ ದೊರಕಿತ್ತು.
ಆದರೆ ಆಡಳಿತದ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಿಟಿ ಬಸ್ ಸೇವೆ ಇಲ್ಲವಾಗಿದೆ. ನಗರದ ಹೊರವಲಯದ ಅದೆಷ್ಟೊ ಬಡಾವಣೆಗಳಿಗೆ ಇಂದಿಗೂ ಕೂಡ ಸಿಟಿ ಬಸ್ ಸೇವೆ ಲಭ್ಯವಾಗುತ್ತಿಲ್ಲ. ಇದರಿಂದ ನಾಗರಿಕರು ತೀವ್ರ ತೊಂದರೆ ಪಡುವಂತಾಗಿದೆ. ಈ ಕಾರಣದಿಂದ ಸುವ್ಯವಸ್ಥಿತ ನಗರ ಸಾರಿಗೆ ವ್ಯವಸ್ಥೆಯತ್ತ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ :
ಶಿವಮೊಗ್ಗ ನಗರದ ವಿವಿಧೆಡೆ ಕಾರ್ಯನಿರ್ವಹಣೆ ಮಾಡುತ್ತಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು, ಒಂದೇ ಸೂರಿನಡಿ ತರುವ ಮೂಲಕ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲು ಶಿವಮೊಗ್ಗ ನಗರದಲ್ಲಿ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮತಿ ಕೂಡ ನೀಡಲಾಗಿತ್ತು. ಇಲ್ಲಿಯವರೆಗೂ ಭವನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಅಭಿವೃದ್ದಿ :
ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ, ಶಿವಮೊಗ್ಗದ ಮೆಗ್ಗಾನ್ ಕೂಡ ಒಂದಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಸದರಿ ಆಸ್ಪತ್ರೆಗೆ ಆಗಮಿಸುತ್ತಾರೆ. ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ಮೆಗ್ಗಾನ್ ಆಸ್ಪತ್ರೆಯನ್ನು ಮಾದರಿಯಾಗಿ ಅಭಿವೃದ್ದಿಗೊಳಿಸಬೇಕು. ಪ್ರತ್ಯೇಕ ಜಿಲ್ಲಾಸ್ಪತ್ರೆ ಸ್ಥಾಪನೆಯಾಗಬೇಕು. ಮಧ್ಯ ಕರ್ನಾಟಕ ಭಾಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ದಿಗೊಳ್ಳಬೇಕಾಗಿದೆ.
ಆಯುಷ್ ವಿಶ್ವವಿದ್ಯಾಲಯ :
ದಕ್ಷಿಣ ಭಾರತದ ಮೊಟ್ಟಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪನೆ ಮಾಡಲು ಕಳೆದ ಹಲವು ವರ್ಷಗಳ ಹಿಂದಿನ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಗತ್ಯ ಭೂಮಿ ಕಾಯ್ದಿರಿಸಲಾಗಿದೆ. ಆದರೆ ಇಲ್ಲಿಯವರೆಗೂ ಆಯುಷ್ ವಿವಿ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಬೇಕಾಗಿದೆ.
Shivamogga, October 3: Several administrative matters concerning Shivamogga city and the district have remained stalled for decades. Allegations are emerging from the public that the authorities have adopted an attitude of utter indifference regarding the implementation of projects that would benefit hundreds of thousands of citizens! Details are as follows.


ಒಂದೊಳ್ಳೆ ವರದಿ..ಅಭಿನಂದನೆಗಳು.