ವರದಿ : ಬಿ.ರೇಣುಕೇಶ್
ಶಿವಮೊಗ್ಗ (shimoga), ನವೆಂಬರ್ 01: ‘ವೈಭಯುತ ಮೆರವಣಿಗೆ… ರಾರಾಜಿಸಿದ ಕನ್ನಡ ಧ್ವಜಗಳು… ಮೊಳಗಿದ ಜಯಘೋಷಗಳು… ಕಲಾತಂಡಗಳ ಮೆರಗು… ಕನ್ನಡ ಕಟ್ಟಾಳುಗಳ ವೇಷಭೂಷಣದಲ್ಲಿ ಕಂಗೋಳಿಸಿದ ಮಕ್ಕಳು…’
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ, ನವೆಂಬರ್ 01 ರಂದು ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿತ್ತು. ‘ಕನ್ನಡ ಡಿಂಡಿಮ’, ‘ಕನ್ನಡಾಂಬೆ ಭುವನೇಶ್ವರಿ ದೇವಿ’ಯ ಜಯಘೋಷ ಮುಗಿಲುಮುಟ್ಟಿತ್ತು. ಭಾರೀ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳು ಎಲ್ಲರ ಕೇಂದ್ರಬಿಂಧುವಾಗಿದ್ದರು!
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಬಿಇಓ ಕಚೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮೆರವಣಿಗೆ ಹಾಗೂ ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭವು ಅತ್ಯಂತ ಅಚ್ಚುಕಟ್ಟಾಗಿ, ವೈಭವಯುತವಾಗಿ ನೆರವೇರಿತು.
ಈ ಹಿಂದಿನ ರಾಜ್ಯೋತ್ಸವ ಮೆರವಣಿಗೆಗಳಿಗೆ ಹೋಲಿಸಿದರೆ, ಈ ಬಾರಿಯ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಿಕ್ಷಣ ಇಲಾಖೆ ಮಾಹಿತಿ ಅನುಸಾರ, ಸುಮಾರು 6 ಸಾವಿರಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿದ್ದರು.
ಧಜ್ವಾರೋಹಣ ನಡೆದ ನೆಹರು ಕ್ರೀಡಾಂಗಣದಲ್ಲಿ ಅಂದಾಜು 22 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳಿದ್ದರು. ಇಡೀ ಕ್ರೀಡಾಂಗಣ ಮಕ್ಕಳಿಂದ ಗಿಜಿಗುಡುತ್ತಿತ್ತು. ಎಲ್ಲೆ ನೋಡಿದರಲ್ಲಿ ಕನ್ನಡ ಶಾಲು, ಧ್ವಜಗಳು ಗೋಚರಿಸುತ್ತಿದ್ದವು.
ವರ್ಣರಂಜಿತ ಮೆರವಣಿಗೆ : ತಾಯಿ ಭುವನೇಶ್ವರಿ ದೇವರ ಮೆರವಣಿಗೆ ವರ್ಣರಂಜಿತವಾಗಿತ್ತು. ನಗರ ವ್ಯಾಪ್ತಿಯ 90 ಶಾಲೆಯ ಸಾವಿರಾರು ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬಾಲಕಿಯರ ತಂಡವೊಂದು ಪೂರ್ಣಕುಂಭ ಹೊತ್ತು ಸಾಗಿದ್ದು ಆಕರ್ಷಕವಾಗಿತ್ತು.
ಉಳಿದಂತೆ ವಿದ್ಯಾರ್ಥಿಗಳೇ ಡೊಳ್ಳು, ವೀರಗಾಸೆ, ಚಂಡೆ ಸೇರಿದಂತೆ ಹಲವು ಸಾಂಪ್ರದಾಯಿಕ ಹಾಗೂ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಕನ್ನಡದ ಸಾಹಿತಿಗಳು, ಹೋರಾಟಗಾರರು, ವಚನಕಾರರು, ದಾಸರು, ರಾಜರು ಸೇರಿದಂತೆ ವಿವಿಧ ವರ್ಗಗಳ ಕನ್ನಡ ಕಟ್ಟಾಳುಗಳ ವೇಷಭೂಷಣದಲ್ಲಿ ಮಕ್ಕಳು ಕಂಗೊಳಿಸಿದರು.
12 ಶಾಲೆಗಳ ಬ್ಯಾಂಡ್ ಸೆಟ್ ತಂಡ, 8 ಶಾಲೆಗಳ ನೂರಾರು ಮಕ್ಕಳಿದ್ದ ವಿವಿಧ ಜಾನಪದ ಕಲಾಪ್ರಕಾರಗಳ ತಂಡ, 4 ಶಾಲೆಗಳ 100 ಕ್ಕೂ ಅಧಿಕ ಮಕ್ಕಳು ವೇಷಭೂಷಣ ಧರಿಸಿ ಕಂಗೊಳಿಸಿದರು. ಉಳಿದಂತೆ ಕನ್ನಡ ವರ್ಣಮಾಲೆಗಳ ಅಕ್ಷರಗಳ ಭಿತ್ತಿ ಚಿತ್ರಗಳು, ಸಾಹಿತಿಗಳ ನುಡಿಮುತ್ತುಗಳ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಿದರು.
ದಾಖಲೆ : ಈ ಬಾರಿಯ ಕನ್ನಡ ರಾಜ್ಯೋತ್ಸವ ಮೆರವಣಿಗೆಯು ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ಒಂದು ದಾಖಲೆಯಾಗಿದೆ. ಇಷ್ಟೊಂದು ಅದ್ದೂರಿ ಮೆರವಣಿಗೆ ಈ ಹಿಂದಿನ ರಾಜ್ಯೋತ್ಸವದ ವೇಳೆ ನಡೆದಿರಲಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಆಸಕ್ತಿಯ ಫಲವಾಗಿ ರಾಜ್ಯೋತ್ಸವ ಮೆರವಣಿಗೆ ಉತ್ಸವ ಮಾದರಿಯಲ್ಲಿ ಕಳೆಗಟ್ಟುವಂತಾಗಿದ್ದಂತೂ ಸತ್ಯವಾಗಿದೆ.
ಬೆಂಗಳೂರಿಗಿಂತ ಶಿವಮೊಗ್ಗದಲ್ಲಿಯೇ ಅದ್ದೂರಿ!
*** ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಮುಖ್ಯಮಂತ್ರಿಗಳು ಭಾಗಹಿಸುವ ಸರ್ಕಾರಿ ಕನ್ನಡ ರಾಜ್ಯೋತ್ಸವ ಸಮಾರಂಭವು ಅತ್ಯಂತ ಅದ್ದೂರಿಯಾಗಿ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಸಮಾರಂಭ ಮೀರಿಸುವಂತೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭ ನೆರವೇರಿದ್ದು ಕಂಡುಬಂದಿತು.
ಬಿಇಓ ರಮೇಶ್ ನಾಯ್ಕ್ ಹೇಳಿದ್ದೇನು?
*** ‘ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ – ಸಡಗರದಿಂದ ಆಚರಿಸಬೇಕು. ಶಾಲಾ ಮಕ್ಕಳಿಗೂ ಕನ್ನಡ ನಾಡಿನ ಮಹತ್ವದ ಅರಿವಾಗಬೇಕು ಎಂಬ ಉದ್ದೇಶದಿಂದ ನಗರ ವ್ಯಾಪ್ತಿಯ ಶಾಲೆಗಳ ಸಾವಿರಾರು ಮಕ್ಕಳನ್ನು ರಾಜ್ಯೋತ್ಸವ ಮೆರವಣಿಗೆ ಹಾಗೂ ಕ್ರೀಡಾಂಗಣದಲ್ಲಿ ಆಯೋಜಿತವಾಗಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾಗುವಂತೆ ಮಾಡಲಾಗಿತ್ತು. ಮಕ್ಕಳನ್ನು ಕರೆತರಲು ಹಾಗೂ ಕರೆದೊಯ್ಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದಕ್ಕಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರ ಸಭೆ ನಡೆಸಿ ಕಳೆದ ಕೆಲ ದಿನಗಳ ಹಿಂದೆಯೇ ಅಗತ್ಯ ಸಲಹೆ – ಸೂಚನೆಗಳನ್ನು ನೀಡಲಾಗಿತ್ತು. ಇದೆಲ್ಲದರ ಫಲವಾಗಿ ಸುಮಾರು 22 ಸಾವಿರ ಶಾಲಾ ಮಕ್ಕಳು ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗುವಂತಾಯಿತು’ ಎಂದು ಶಿವಮೊಗ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ರಮೇಶ್ ನಾಯ್ಕ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
Grand Kannada Rajyotsava Celebrations in Shivamogga: A Captivating Procession and Lively Joy Among Children! | Shivamogga, November 1: A magnificent procession, fluttering Kannada flags, resounding cheers, vibrant performances by cultural troupes, and children dressed as iconic figures of the Kannada movement—all these brought the 70th Kannada Rajyotsava celebrations to life in Shivamogga, the gateway to the Malenadu region, on November 1st. Slogans celebrating the Kannada spirit and the goddess ‘Kannadambe Bhuvaneshwari Devi’ echoed through the air. A large number of school students took center stage, becoming the highlight of the event!

