
shimoga | ತುಂಬಿ ಹರಿಯುತ್ತಿದ್ದ ನಾಲೆಯಲ್ಲಿ ಈಜಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಲೈನ್’ಮ್ಯಾನ್!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆ. 1: ಪ್ರಸ್ತುತ ಮಳೆಗಾಲದ ವೇಳೆ (rainy season) ಮಲೆನಾಡಿನ ಹಲವೆಡೆ, ಜೀವ ಪಣಕ್ಕಿಟ್ಟು ಮೆಸ್ಕಾಂ ಲೈನ್’ಮ್ಯಾನ್ ಗಳು (mescom linemans) ವಿದ್ಯುತ್ ಲೈನ್ ದುರಸ್ತಿಗೊಳಿಸಿದ ವೀಡಿಯೋ – ಪೋಟೋಗಳು, ಸಾಮಾಜಿಕ ಜಾಲತಾಣಗಳಲ್ಲಿ (social media) ಸಾಕಷ್ಟು ಸಂಚಲನ ಸೃಷ್ಟಿಸಿದ್ದವು. ಇವು ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದ್ದವು.
ಈ ಸಾಲಿಗೆ ಶಿವಮೊಗ್ಗ ತಾಲೂಕಿನ (shimoga taluk) ಮೆಸ್ಕಾಂ ಲೈನ್’ಮ್ಯಾನ್ ಓರ್ವರ ಸಾಹಸ ಕಾರ್ಯವು ಸೇರ್ಪಡೆಯಾಗಿದೆ. ಮಳೆಯಿಂದ ಮರ ಉರುಳಿಬಿದ್ದ ಪರಿಣಾಮದಿಂದ ತುಂಡರಿಸಿ ಬಿದ್ದಿದ್ದ ವಿದ್ಯುತ್ ಲೈನ್ (electric line) ವೊಂದನ್ನು, ತುಂಬಿ ಹರಿಯುತ್ತಿದ್ದ ಕೆರೆ ನಾಲೆಯಲ್ಲಿಯೇ ಈಜಿ ದುರಸ್ತಿಪಡಿಸಿದ್ದಾರೆ. ಲೈನ್’ಮ್ಯಾನ್ ಕಾರ್ಯಕ್ಕೆ ಗ್ರಾಮಸ್ಥರು ಶಬ್ಬಾಸ್’ಗಿರಿ ವ್ಯಕ್ತಪಡಿಸಿದ್ದಾರೆ.
ಏನೀದು ಘಟನೆ? : ಕಳೆದ ಕೆಲ ದಿನಗಳ ಹಿಂದೆ ಬಸವನಗಂಗೂರು ಗ್ರಾಮ ವ್ಯಾಪ್ತಿಯಲ್ಲಿ, ಮರವೊಂದು ಉರುಳಿಬಿದ್ದ ಕಾರಣದಿಂದ ಐಪಿ ಸೆಟ್ ವಿದ್ಯುತ್ ಲೈನ್ ತುಂಡರಿಸಿ ಬಿದ್ದಿತ್ತು. ಸಮೀಪದಲ್ಲಿಯೇ ಕೆರೆ ನಾಲೆ ತುಂಬಿ ಹರಿಯುತ್ತಿತ್ತು.
ಕುಂಸಿ ಮೆಸ್ಕಾಂ (mescom kumsi) ಉಪ ವಿಭಾಗದ ಲೈನ್’ಮ್ಯಾನ್ ರಮೇಶ್ ಅವರು, ಹರಿಯುವ ಹಳ್ಳದಲ್ಲಿಯೇ ಈಜಿಕೊಂಡು ತೆರಳಿ ಲೈನ್ ದುರಸ್ತಿ ಪಡಿಸಿದ್ದಾರೆ. ಇದಕ್ಕೆ ಇತರೆ ಲೈನ್’ಮ್ಯಾನ್ ಗಳಾದ ಅಶ್ವಥ್, ಸಚಿನ್ ಅವರು ಸಾಥ್ ನೀಡಿದ್ದಾರೆ. ಈ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಿದ್ದಾರೆ.
ಲೈನ್’ಮ್ಯಾನ್ (lineman) ಗಳ ಕರ್ತವ್ಯ ಪ್ರಜ್ಞೆ, ಜನಪರ ಕಾಳಜಿ ಹಾಗೂ ಸಾಹಸ ಕಾರ್ಯಕ್ಕೆ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.