
shimoga | ಸರ್ಕಾರಿ ನೌಕರರ ಸಂಘದ ಚುನಾವಣೆ ಮೇಲೆ ರಾಜಕೀಯ ಕರಿನೆರಳು : ಶಿವಮೊಗ್ಗ ತಹಶೀಲ್ದಾರ್ ದಿಢೀರ್ ಎತ್ತಂಗಡಿ!
ಶಿವಮೊಗ್ಗ (shivamogga), ನ. 14: ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಕಾವೇರಿದೆ. ಈ ನಡುವೆ ಬಣ ರಾಜಕಾರಣ ಜೋರಾಗಿದೆ. ಭಾರೀ ಹೈಡ್ರಾಮಾಕ್ಕೆ ವೇದಿಕೆ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಚುನಾವಣೆಗೆ ಸ್ಪರ್ಧಿಸಿದ್ದ ಶಿವಮೊಗ್ಗ ತಹಶೀಲ್ದಾರ್ ಬಿ ಎನ್ ಗಿರೀಶ್ ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ!
ಬಿ ಎನ್ ಗಿರೀಶ್ ಅವರು ಶಿವಮೊಗ್ಗ ತಾಲೂಕು ಕಂದಾಯ ವಿಭಾಗದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇದೇ ವಿಭಾಗದಿಂದ ಶಿವಮೊಗ್ಗ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಜಿ ಹೆಚ್ ಅವರು ಸ್ಪರ್ಧಿಸಿದ್ದರು. ಇಬ್ಬರ ನಡುವೆ ಭಾರೀ ಪೈಪೋಟಿ ಕಂಡುಬಂದಿತ್ತು.
ಈ ನಡುವೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮೋಹನ್ ಕುಮಾರ್ ಅವರು, ಸಿ ಎಸ್ ಷಡಾಕ್ಷರಿ ಬಣದಿಂದ ಹೊರಬಂದು ಪ್ರತ್ಯೇಕ ಗುಂಪು ರಚಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದ್ದರು. ಸದರಿ ಮೋಹನ್ ಕುಮಾರ್ ಗಂಪಿನಲ್ಲಿ ಸತ್ಯನಾರಾಯಣ ಜಿ ಹೆಚ್ ಅವರು ಕೂಡ ಕಾಣಿಸಿಕೊಂಡಿದ್ದರು.
ಈ ನಡುವೆ ಸತ್ಯನಾರಾಯಣ ಅವರ ಎದುರಾಳಿಯಾಗಿ ಕಣಕ್ಕಿಳಿದಿದ್ದ, ತಹಶೀಲ್ದಾರ್ ಬಿ ಎನ್ ಗಿರೀಶ್ ಅವರನ್ನು ನ. 14 ರಂದು ವರ್ಗಾವಣೆಗೊಳಿಸಲಾಗಿದೆ. ಅವರ ಸ್ಥಾನಕ್ಕೆ ರಾಜೀವ್ ಎಂಬುವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚುನಾವಣೆಗೆ ಸ್ಪರ್ಧಿಸಿದ್ದ ಕಾರಣದಿಂದಲೇ ಬಿ ಎನ್ ಗಿರೀಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಚುನಾವಣೆಯು ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದ್ದು, ರಾಜಕೀಯ ಬಣ್ಣ ಪಡೆದುಕೊಳ್ಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ಅಧಿಕಾರಿಗಳು ಟಾರ್ಗೆಟ್ ಆಗಲಿದ್ದಾರೆ? ಯಾವ ಬಣದ ಕೈ ಮೇಲಾಗಲಿದೆ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
Shimoga District Government Employees Association Executive Committee Director Election is held. Meanwhile factional politics is rampant. The stage is set for a massive high drama. As a proof of this, Shimoga Tahsildar Girish b n, who contested the election, was suddenly transferred from tashildar post!