s m krishna passed away | ತೀರ್ಥಹಳ್ಳಿ ತಾಲೂಕಿನ ಅಳಿಯರಾಗಿದ್ದ ಎಸ್ ಎಂ ಕೃಷ್ಣ..!
ವರದಿ : ಬಿ. ರೇಣುಕೇಶ್
ಬೆಂಗಳೂರು / ಶಿವಮೊಗ್ಗ, ಡಿ.10: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ (92) ಅವರು, ಡಿ. 10 ರ ಮುಂಜಾನೆ ಬೆಂಗಳೂರಿನ ಸದಾಶಿವನಗರದಲ್ಲಿನ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎಸ್ ಎಂ ಕೃಷ್ಣ ಅವರ ಆರೋಗ್ಯದಲ್ಲಿ, ಮುಂಜಾನೆ 2 ಗಂಟೆ ಸುಮಾರಿಗೆ ದಿಢೀರ್ ಏರುಪೇರಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮನೆಗೆ ಆಗಮಿಸಿದ ವೈದ್ಯರು ತಪಾಸಣೆ ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಎಸ್ ಎಂ ಕೃಷ್ಣ ವಿಧಿವಶರಾಗಿದ್ದಾರೆ.
ಇಂದು ಸದಾಶಿವನಗರದ ನಿವಾಸದಲ್ಲಿಯೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಡಿ. 11 ರಂದು ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ. ಅಲ್ಲಿಯೇ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.
ರಾಜಕೀಯ ಜೀವನ : ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ 1932 ರ ಮೇ 1 ರಂದು ಎಸ್ ಎಂ ಕೃಷ್ಣ ಜನಿಸಿದ್ದರು. 1962 ರಲ್ಲಿ ಮೊಟ್ಟಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಜಯ ಸಾಧಿಸಿದ್ದರು. ನಂತರ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸೇರ್ಪಡೆಯಾಗಿದ್ದರು.
1967 ರ ಅಸೆಂಬ್ಲಿ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 1968 ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.
ಆ ಪಕ್ಷದಿಂದಲೇ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗುತ್ತ ಬಂದಿದ್ದರು. ಕಾಂಗ್ರೆಸ್ ನ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರು. ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿ 1999 ರಿಂದ 2004 ರವರೆಗೆ ಕಾರ್ಯನಿರ್ವಹಣೆ ಮಾಡಿದ್ದರು. 2017 ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದ ಎಸ್ ಎಂ ಕೃಷ್ಣ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು. 2023 ರಲ್ಲಿ ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರು.
ತೀರ್ಥಹಳ್ಳಿ ನಂಟು : ಎಸ್ ಎಂ ಕೃಷ್ಣ ಅವರ ಪತ್ನಿಯಾದ ಪ್ರೇಮಾ ಅವರು ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ನಿವಾಸಿಯಾದ ಚಿನ್ನಪ್ಪಗೌಡರ ಪುತ್ರಿಯಾಗಿದ್ದಾರೆ. 1996 ರಲ್ಲಿ ಪ್ರೇಮಾ ಅವರೊಂದಿಗೆ ಎಸ್ ಎಂ ಕೃಷ್ಣರ ವಿವಾಹ ನೆರವೇರಿತ್ತು.
ಪ್ರೇಮಾ ಅವರೊಂದಿಗೆ ಎಸ್ ಎಂ ಕೃಷ್ಣ ಅವರ ವಿವಾಹ ನೆರವೇರಲು, ತೀರ್ಥಹಳ್ಳಿ ತಾಲೂಕಿನವರೇ ಆದ ಮಾಜಿ ಸಿಎಂ ದಿವಂಗತ ಕಡಿದಾಳು ಮಂಜಪ್ಪ ಅವರು ಮುಖ್ಯ ಕಾರಣಕರ್ತರಾಗಿದ್ದಾರೆ. ಕಡಿದಾಳು ಮಂಜಪ್ಪ ಅವರು ಎಸ್ ಎಂ ಕೃಷ್ಣ ಕುಟುಂಬದ ಸಂಬಂಧಿಕರಾಗಿದ್ದರು.
ಎಸ್ ಎಂ ಕೃಷ್ಣ ಅವರ ವಿವಾಹಕ್ಕೆ ಹೆಣ್ಣು ನೋಡುತ್ತಿದ್ದಾಗ, ಕಡಿದಾಳು ಮಂಜಪ್ಪ ಅವರು ತಮಗೆ ಪರಿಚಯವಿರುವ ಕುಡುಮಲ್ಲಿಗೆ ಗ್ರಾಮದ ಚಿನ್ನಪ್ಪಗೌಡರ ಮನೆಯ ಬಗ್ಗೆ ಎಸ್ ಎಂ ಕೃಷ್ಣ ಅವರ ಕುಟುಂಬದವರಿಗೆ ತಿಳಿಸಿದ್ದರು.
ಅದರಂತೆ ಎಸ್ ಎಂ ಕೃಷ್ಣ ಮತ್ತವರ ಕುಟುಂಬದವರು ಕುಡುಮಲ್ಲಿಗೆ ಗ್ರಾಮಕ್ಕೆ ಆಗಮಿಸಿ, ಹೆಣ್ಣು ನೋಡುವ ಶಾಸ್ತ್ರ ನಡೆಸಿದ್ದರು. ಪ್ರೇಮಾ ಅವರನ್ನೇ ವಿವಾಹವಾಗಿದ್ದರು. ತಮ್ಮ ವೈವಾಹಿಕ ಜೀವನದ ವಿಷಯದ ಬಗ್ಗೆ ಸ್ವತಃ ಎಸ್ ಎಂ ಕೃಷ್ಣ ಅವರೇ, ಈ ಹಿಂದೆ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದರು.
‘ಎಸ್ ಎಂ ಕೃಷ್ಣ ಅವರು ತೀರ್ಥಹಳ್ಳಿ ತಾಲೂಕಿನ ಅಳಿಯರಾಗಿದ್ದಾರೆ. ಕುಡುಮಲ್ಲಿಗೆ ಗ್ರಾಮದ ನಿವಾಸಿಯಾದ ಪ್ರೇಮಕ್ಕರನ್ನು ವಿವಾಹವಾಗಿದ್ದರು. ಈ ಕಾರಣದಿಂದಲೇ ಅವರು ತೀರ್ಥಹಳ್ಳಿ ತಾಲೂಕಿನ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದರು. ಅವರು ಸಿಎಂ ಆದ ವೇಳೆ ತಾಲೂಕಿನ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರು.
ಹಲವು ಬಾರಿ ಎಸ್ ಎಂ ಕೃಷ್ಣರನ್ನು ಭೇಟಿಯಾಗಿದ್ದೆ. ಸಜ್ಜನ, ಮಾದರಿ ರಾಜಕಾರಣಿಯಾಗಿದ್ದರು. ಅವರ ನಿಧನವು ತಮಗೆ ಅತೀವ ನೋವುಂಟು ಮಾಡಿದೆ’ ಎಂದು ತೀರ್ಥಹಳ್ಳಿ ಕ್ಷೇತ್ರದ ಹಾಲಿ ಶಾಸಕರೂ ಆದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
s m krishna, the former chief minister of karnataka and Union minister, passed away on Tuesday at 2. 45 am at his residence in Bengaluru. He was 92 years old.
