
ಶಿಕಾರಿಪುರ – ಸೊರಬದಲ್ಲಿ ಮನೆಗಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಹೊತ್ತೊಯ್ದ ಕಳ್ಳರು!
ಶಿಕಾರಿಪುರ / ಸೊರಬ : ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣಗಳಲ್ಲಿ, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯವನ್ನು ಕಳ್ಳರು ಅಪಹರಿಸಿರುವ ಘಟನೆ ನಡೆದಿದೆ.
ಶಿಕಾರಿಪುರ ವರದಿ : ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾ (49) ಎಂಬುವರ ಮನೆಯಲ್ಲಿ ಡಿ. 25 ರ ರಾತ್ರಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ, ಮೇಲ್ಛಾವಣಿಯ ಮೂಲಕ ಮನೆಯೊಳಗೆ ಕಳ್ಳರು ಪ್ರವೇಶಿಸಿದ್ದಾರೆ.
83 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 70 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಕುಟುಂಬದವರು ಮನೆಗೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೊರಬ ವರದಿ : ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಡಿ. 27 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ, ಹಾಡಹಗಲೇ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ಅಪಹರಿಸಿರುವ ಘಟನೆ ನಡೆದಿದೆ.
ನಾಗರಾಜ (55) ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಬೆಳಿಗ್ಗೆ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು, ಕುಟುಂಬದವರೆಲ್ಲ ಅಡಕೆ ತೋಟದ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಆಗಮಿಸಿದಾಗ, ಬಾಗಿಲ ಬೀಗ ಮುರಿದು ನಗನಾಣ್ಯ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
1.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shikaripura / Soraba: In two separate house burglary cases in Shikaripura and Soraba taluks of the district, gold ornaments and cash worth lakhs of rupees have been stolen by thieves.