ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜ. 8: ಶಿವಮೊಗ್ಗ ನಗರಕ್ಕೆ 24X7 ಕುಡಿಯುವ ನೀರಿನ ಕಾಮಗಾರಿ ಅಕ್ಷರಶಃ ನಾಗರೀಕರ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಹಲವೆಡೆ ವರ್ಷಗಳೇ ಉರುಳಿದರೂ ನೀರು ಪೂರೈಕೆಯಾಗುತ್ತಿಲ್ಲ. ಮತ್ತೊಂದೆಡೆ, ಅವ್ಯವಸ್ಥಿತ – ಅರ್ಧಂಬರ್ಧ ಕಾಮಗಾರಿಗಳಿಂದ, ನಾಗರೀಕರು ತೊಂದರೆ ಪಡುವಂತಾಗಿದೆ. ಜೊತೆಗೆ ಗುಂಡಿ ಗಂಡಾಂತರಕ್ಕೆ ತತ್ತರಿಸುವಂತಾಗಿದೆ..!
ಶಿವಮೊಗ್ಗದ ಶಾರದಮ್ಮ ಲೇಔಟ್ ಹಾಗೂ ಸೋಮಿನಕೊಪ್ಪ ಬಡಾವಣೆಗಳಲ್ಲಿ, ಕಾಮಗಾರಿಗೆಂದು ತೆಗೆಯಲಾದ ಗುಂಡಿಗಳು ಸದ್ಯ ಅಪಾಯಕಾರಿಯಾಗಿ ಪರಿವರ್ತಿತವಾಗಿವೆ. ಜೀವ ಬಲಿಗೆ ಕಾದು ಕುಳಿತಿವೆ. ಹಲವು ದಿನಗಳಿಂದ ಅವ್ಯವಸ್ಥೆಯಿದ್ದರೂ ಇಲ್ಲಿಯವರೆಗೂ ಆಡಳಿತ ಎಚ್ಚೆತ್ತುಕೊಂಡಿಲ್ಲ. ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘24X7 ಯೋಜನೆಯಡಿ ಪೈಪ್ ಲೈನ್ ಹಾಗೂ ನಲ್ಲಿ ಸಂಪರ್ಕಕ್ಕೆ ಕಳೆದ 3 ತಿಂಗಳ ಹಿಂದೆ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ಇಲ್ಲಿಯವರೆಗೂ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಮನೆಗಳ ಮುಂಭಾಗ ಹಾಗೂ ರಸ್ತೆ ಇಕ್ಕೆಲಗಳಲ್ಲಿಯೇ ಗುಂಡಿಗಳನ್ನು ತೆಗೆದಿರುವುದರಿಂದ, ಮನೆಗಳಿಗೆ ಹೋಗಲು ಸಂಕಷ್ಟ ಪಡುವಂತಾಗಿದೆ’ ಎಂದು ಶಾರದಮ್ಮ ಲೇಔಟ್ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
‘ಮನೆ ಮುಂಭಾಗ ತೆಗೆದಿರುವ ಕೆಲ ಗುಂಡಿಗಳು ಆಳವಾಗಿವೆ. ಅತ್ಯಂತ ಎಚ್ಚರಿಕೆಯಿಂದ ಮನೆಯೊಳಗೆ ಹೋಗಿಬರುವಂತಹ ದುಃಸ್ಥಿತಿಯಿದೆ. ಸಣ್ಣ ಮಕ್ಕಳು, ವಯೋವೃದ್ದರು, ಅಶಕ್ತರು ಮನೆಯಿಂದ ಹೊರಹೋಗಲು ಭಯವಪಡುವಂತಾಗಿದೆ. ಇಷ್ಟೆಲ್ಲ ಅಪಾಯಕಾರಿ ಸ್ಥಿತಿಯಿದ್ದರೂ ಇಲ್ಲಿಯವರೆಗೂ ನಾಗರೀಕರಿಗೆ ನೆರವಾಗುವ ಕಾರ್ಯವನ್ನು ಆಡಳಿತ ನಡೆಸಿಲ್ಲ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವ್ಯವಸ್ಥೆ ವೀಕ್ಷಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಸೋಮಿನಕೊಪ್ಪದಲ್ಲಿಯೂ ಅವಾಂತರ : ಸೋಮಿನಕೊಪ್ಪ ಬಡಾವಣೆಯಲ್ಲಿಯೂ 24*7 ಯೋಜನೆ ಅನುಷ್ಠಾನ ಅವ್ಯವಸ್ಥೆಯ ಆಗರವಾಗಿದೆ. ಪೈಪ್ ಅಳವಡಿಕೆ ಮಾಡಿ 2 ವರ್ಷವಾಗುತ್ತಾ ಬಂದಿದೆ. ಇಲ್ಲಿಯವರೆಗೂ ಯೋಜನೆಯಡಿ ನೀರು ಪೂರೈಕೆಯಾಗುತ್ತಿಲ್ಲ. ಮತ್ತೊಂದೆಡೆ, ನೀರು ಪೂರೈಕೆ ಪರೀಕ್ಷೆಗೆಂದು ಇತ್ತೀಚೆಗೆ ತೆಗೆದ ಗುಂಡಿಗಳನ್ನು ಕೂಡ ಸಮರ್ಪಕವಾಗಿ ಮುಚ್ಚಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಬಡಾವಣೆಯ ಕೋಟೆಗಂಗೂರು ಮುಖ್ಯ ರಸ್ತೆಯ ಸರ್ಕಾರಿ ಶಾಲೆ ಸಮೀಪ ಪೈಪ್ ಲೈನ್ ದುರಸ್ತಿಗೆಂದು ಕಳೆದ ಒಂದು ತಿಂಗಳ ಹಿಂದೆ ತೆಗೆದ ಬೃಹತ್ ಗುಂಡಿಯನ್ನು ಇಲ್ಲಿಯವರೆಗೂ ಮುಚ್ಚಿಲ್ಲ. ಸ್ಥಳದಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯೂ ಮಾಡಿಲ್ಲ. ಸ್ವಲ್ಪ ಹೆಚ್ಚುಕಮ್ಮಿಯಾದರೂ ವಾಹನ ಸವಾರರು, ಪಾದಚಾರಿಗಳು ಗುಂಡಿಗೆ ಬೀಳುವಂತಹ ದುಃಸ್ಥಿತಿಯಿದೆ ಎಂದು ಸೋಮಿನಕೊಪ್ಪ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಂಬಂಧಿಸಿದವರ ಗಮನಕ್ಕೆ ತಂದರೂ ಇಲ್ಲಿಯವರೆಗೂ ಅವ್ಯವಸ್ಥೆ ಸರಿಪಡಿಸಿಲ್ಲ. ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ತಳೆದಿದ್ದಾರೆ. ತಕ್ಷಣವೇ ಗುಂಡಿ ಗಂಡಾಂತರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಿ, ನಾಗರೀಕರಿಗೆ ನೀರು ಪೂರೈಸಬೇಕು ಎಂದು ಸೋಮಿನಕೊಪ್ಪ ನಿವಾಸಿಗಳು ಆಗ್ರಹಿಸುತ್ತಾರೆ.
Shivamogga, january 8: 24*7 drinking water works for Shimoga city has literally become a burden for the citizens. In many places, water is not being supplied even after years. On the other hand, due to haphazard – half-baked works, citizens are suffering. In addition, the pothole is dangerous..!
In Shimoga’s Sharadamma layout and Sominakoppa extension, potholes removed for work have now turned dangerous. Waiting for life sacrifice. Even though there has been chaos for many days, the administration has not woken up till now.

