
shimoga | ಶಿವಮೊಗ್ಗ : ಕುಡಿಯುವ ನೀರಿಗೆ ಹಾಹಾಕಾರ – ಮಹಿಳೆಯರಿಂದ ಪ್ರತಿಭಟನೆ!
ಶಿವಮೊಗ್ಗ (shivamogga), ಜ. 20: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಜ. 20 ರಂದು ಜಲ ಮಂಡಳಿ ಕಚೇರಿ ಎದುರು ಬಡಾವಣೆ ಮಹಿಳೆಯರು ಪ್ರತಿಭಟನೆ ನಡೆಸಿದರು.
ಸಿದ್ಧಿ ವಿನಾಯಕ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮಹಿಳೆಯರು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಲ ಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು. ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
24*7 ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬಡಾವಣೆಯ ಹಲವೆಡೆ ಇಲ್ಲಿಯವರೆಗೂ ಯೋಜನೆಯಡಿ ಕಾಮಗಾರಿ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಉಪಸ್ಥಿತರಿದ್ದ ಮಾಜಿ ಕಾರ್ಪೋರೇಟರ್ ಬಿ ಎ ರಮೇಶ್ ಹೆಗ್ಡೆ ಅವರು ಮಾತನಾಡಿ, ‘ಆಶ್ರಯ ಬಡಾವಣೆಯಲ್ಲಿ ಸಾವಿರಾರು ಜನ ವಾಸಿಸುತ್ತಿದ್ದಾರೆ. ಬಹುತೇಕರು ಬಡ, ಕೂಲಿಕಾರ್ಮಿಕ, ಮಧ್ಯಮ ವರ್ಗದವರಾಗಿದ್ದಾರೆ. ಅಸಮರ್ಪಕ ಕುಡಿಯುವ ನೀರು ಪೂರೈಕೆಯಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ’ ಎಂದು ತಿಳಿಸಿದರು.
ಜನವರಿ 30 ರೊಳಗೆ ಬಡಾವಣೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು. ಇಲ್ಲದಿದ್ದರೆ ಸಾವಿರಾರು ಜನರೊಂದಿಗೆ ಜಲ ಮಂಡಳಿಗೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಯುವ ಮುಖಂಡ ಕೆ. ಚೇತನ್ ಅವರು ಮಾತನಾಡಿ, ‘ಬೊಮ್ಮನಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಪರಿಹಾರಕ್ಕೆ ಈಗಾಗಲೇ ಹಲವು ಬಾರಿ ಜಲ ಮಂಡಳಿಗೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ನಾಗರೀಕರು ಬೀದಿಗಿಳಿದು ಪ್ರತಿಭಟನೆ ನಡೆಸುವ ಮುನ್ನ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚರಣ್, ರವಿ, ಲಿಂಗರಾಜು ಸೇರಿದಂತೆ ಸಿದ್ಧಿ ವಿನಾಯಕ ಮಹಿಳಾ ಒಕ್ಕೂಟದ ಪ್ರಮುಖರು ಉಪಸ್ಥಿತರಿದ್ದರು.