
ಚೂರಿಯಿಂದ ಇರಿದು ಹಲ್ಲೆ ಮಾಡಿದ್ದ ಐವರು ಯುವಕರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ, ಎ. 7: ಇಬ್ಬರಿಗೆ ಚೂರಿಯಿಂದ ಇರಿದು ಹಾಗೂ ಇತರೆ ನಾಲ್ವರ ಮೇಲೆ ಹಲ್ಲೆ ಮಾಡಿದ್ದ ಐವರು ಯುವಕರಿಗೆ, 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಿವಮೊಗ್ಗದ ಕೊರಮಕೇರಿ ನಿವಾಸಿಗಳಾದ ವಿಜಯಕುಮಾರ್ (26), ಪ್ರವೀಣ್ (20), ನವೀನ್ (24), ಚೇತನ (24) ಹಾಗೂ ಸಂತೋಷ್ (33) ಶಿಕ್ಷೆಗೊಳಗಾದ ಯುವಕರೆಂದು ಗುರುತಿಸಲಾಗಿದೆ. ಇವರಿಗೆ 65 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಎ.6 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ
21-1-2018 ರಂದು ಶಿಕ್ಷೆಗೊಳಗಾದ ಯುವಕರು ಗೋವಿಂದಪುರ ಗ್ರಾಮದ ನಿವಾಸಿಗಳಾದ ನವೀನ್, ನಿತಿನ್, ಗೋಪಿ, ಲೋಹಿತ್, ಪ್ರಜ್ವಲ್, ರಾಜು ಅವರ ಮೇಲೆ ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು.
ಈ ವೇಳೆ ನವೀನ ಮತ್ತು ನಿತಿನ್ ರವರ ಹೊಟ್ಟೆ ಹಾಗೂ ಪಕ್ಕೆಗೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಉಳಿದ ನಾಲ್ವರ ಮೇಲೆ ದೊಣ್ಣೆ, ಕೈಗಳಿಂದ ಹೊಡೆದಿದ್ದರು. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಸಬ್ ಇನ್ಸ್’ಪೆಕ್ಟರ್ ಆಗಿದ್ದ ಬಿ.ಸಿ.ಗಿರೀಶ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.