ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿಸೆಂಬರ್ 4: ಸಾರ್ವಜನಿಕ ಭದ್ರತೆ, ಕಾನೂನು – ಸುವ್ಯವಸ್ಥೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಆಡಳಿತದಿಂದ ಹೊಸದಾಗಿ 400 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ.
‘ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ. ಎಂಜಿಎನ್ಆರ್ ಯೋಜನೆಯಡಿ ಸುಮಾರು 1 ಕೋಟಿ ರೂ.ಗೂ ಹೆಚ್ಚು ಅನುದಾನ ವ್ಯಯಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ಮಾಹಿತಿ ನೀಡಿದ್ದಾರೆ.
ಹೆಚ್ಚುತ್ತಿರುವ ಬೇಡಿಕೆ : ಶಿವಮೊಗ್ಗ ನಗರ ಹಾಗೂ ಹೊರವಲಯದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಬೇಡಿಕೆ ನಾಗರೀಕ ವಲಯದಿಂದ ವ್ಯಕ್ತವಾಗುತ್ತಿತ್ತು. ಈ ಕುರಿತಂತೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮನವಿ ಮಾಡುತ್ತಿದ್ದರು. ಆದರೆ ಆಡಳಿತದಿಂದ ಕ್ಯಾಮರಾಗಳ ಅಳವಡಿಕೆ ಸಾಧ್ಯವಾಗಿರಲಿಲ್ಲ.
ಮತ್ತೊಂದೆಡೆ, ಪಾಲಿಕೆ ವ್ಯಾಪ್ತಿಯ ನಗರದ ಹೊರವಲಯದ ಹಲವೆಡೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕೋಮು ಸೂಕ್ಷ್ಮ ಪ್ರದೇಶಗಳಿವೆ. ಅಭದ್ರತೆಯ ವಾತಾವರಣವಿದೆ. ಇಂತಹ ಸ್ಥಳಗಳಲ್ಲಿ ಪಾಲಿಕೆ ಆಡಳಿತವು ಸಿಸಿ ಕ್ಯಾಮರಾಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬುವುದು ನಗರದ ಹೊರವಲಯದ ಬಡಾವಣೆಗಳ ನಿವಾಸಿಗಳ ಆಗ್ರಹವಾಗಿದೆ.
ಈಗಾಗಲೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೂ ಕೋಟ್ಯಾಂತರ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಈ ಕಾರಣದಿಂದ ಪ್ರಸ್ತುತ ಕ್ಯಾಮರಾಗಳ ಅಳವಡಿಕೆ ವೇಳೆ, ನಗರದ ಹೊರವಲಯದ ಬಡಾವಣೆಗಳತ್ತ ಆದ್ಯ ಗಮನಹರಿಸಬೇಕು ಎಂದು ನಾಗರೀಕರು ಸಲಹೆ ನೀಡುತ್ತಾರೆ.
‘ಅತ್ಯಾಧುನಿಕ ಕ್ಯಾಮರಾಗಳ ಅಳವಡಿಕೆ’ : ಆಯುಕ್ತ ಮಾಯಣ್ಣಗೌಡ

*** ‘ಕಾನೂನು – ಸುವ್ಯವಸ್ಥೆ, ಅಪರಾಧ ಚಟುವಟಿಕೆಗಳ ನಿಯಂತ್ರಣ, ಸುಗಮ ವಾಹನ ಸಂಚಾರ, ನಾಗರೀಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಎಂಜಿಎನ್ಆರ್ ಯೋಜನೆಯಡಿ ಸುಮಾರು 1 ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ 400 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ. ಕ್ಯಾಮರಾ ಅಳವಡಿಕೆಗೂ ಮುನ್ನ ಪೊಲೀಸ್ ಇಲಾಖೆಯಿಂದ ವರದಿ ಪಡೆಯಲಾಗುವುದು. ಯಾವ್ಯಾವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಬೇಕು ಎಂಬುವುದರ ನಿರ್ಧಾರ ಮಾಡಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಇಲಾಖೆ ಗಮನಹರಿಸಲಿ…!
*** ನಗರದ ಹೊರವಲಯದ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆದರೆ ಹಲವು ವಸತಿ ಬಡಾವಣೆಗಳಲ್ಲಿ ಆಡಳಿತದ ಸಿಸಿ ಕ್ಯಾಮರಾ ಕಣ್ಗಾವಲಿನ ವ್ಯವಸ್ಥೆಯಿಲ್ಲವಾಗಿದೆ. ಇಂತಹ ಪ್ರದೇಶಗಳಲ್ಲಿ ಕ್ಯಾಮರಾಗಳ ಅಳವಡಿಕೆಗೆ ಪೊಲೀಸ್ ಇಲಾಖೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಸಂಬಂಧ ಪಾಲಿಕೆ ಆಡಳಿತಕ್ಕೆ ಪೊಲೀಸ್ ಇಲಾಖೆ ಅಗತ್ಯ ವರದಿ ಸಲ್ಲಿಸಬೇಕಾಗಿದೆ.
ಸುಗಮ ಟ್ರಾಫಿಕ್ : ಪಾಲಿಕೆಯಿಂದ ಹಲವು ಕ್ರಮ
*** ‘ಶಿವಮೊಗ್ಗ ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಪಾಲಿಕೆ ಆಡಳಿತ ಹಲವು ಕ್ರಮಕೈಗೊಂಡಿದೆ’ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ತಿಳಿಸಿದ್ದಾರೆ. ‘ದುರ್ಗಿಗುಡಿ ಸುತ್ತಮುತ್ತಲಿನ ಕನ್ಸರ್’ವೆನ್ಸಿಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಿಳಿ, ಹಳದಿ ಬಣ್ಣ ಹಚ್ಚುವ ಕಾರ್ಯ ನಡಸಲಾಗಿದೆ. ವಾಹನಗಳ ವೇಗ ನಿಯಂತ್ರಣಕ್ಕೆ ವಿವಿಧೆಡೆ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ’ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
Shivamogga, December 5: With the aim of facilitating public security and law and order, the Municipal Corporation administration is installing 400 new CCTV cameras in the Shivamogga city limits.

