ಶಿವಮೊಗ್ಗ (shivamogga), ಡಿಸೆಂಬರ್ 5: ರೈತರೋರ್ವರಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಮಾಡಿದ್ದಕ್ಕಾಗಿ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಸರ್ಕಾರಿ ಕಾರನ್ನು ಜಪ್ತಿಗೊಳಿಸುವಂತೆ, ಶಿವಮೊಗ್ಗದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್’ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ಕೃಷಿಕ ನಂದಾಯಪ್ಪ ಎಂಬುವರಿಗೆ ಸೇರಿದ 1 ಎಕರೆ ಜಮೀನನ್ನು, 1992 ರಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಸ್ವಾದೀನ ಪಡಿಸಿಕೊಳ್ಳಲಾಗಿತ್ತು. 22 ಲಕ್ಷ ರೂ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು.
ಆದರೆ 9 ಲಕ್ಷ ರೂ. ಪರಿಹಾರ ಮಾತ್ರ ನೀಡಲಾಗಿತ್ತು. ಬಾಕಿ ಪರಿಹಾರ ಮೊತ್ತ ಬಿಡುಗಡೆಗಾಗಿ ನಂದಾಯಪ್ಪ ಅವರು ಕಚೇರಿಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಾಕಿ ಪರಿಹಾರ ಮೊತ್ತ ಬಿಡುಗಡೆಯಾಗಿರಲಿಲ್ಲ.
ಕೊನೆಗೆ ನಂದಾಯಪ್ಪರವರು ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2 ನೇ ಸಿವಿಲ್ ಮತ್ತು ಜೆಎಂಎಫ್’ಸಿ ನ್ಯಾಯಾಲಯವು 95,88,283 ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದ ಹೊರತಾಗಿಯೂ ನಂದಾಯಪ್ಪರಿಗೆ ಪರಿಹಾರ ಬಿಡುಗಡೆಯಾಗಿರಲಿಲ್ಲ.
ಈ ಕಾರಣದಿಂದ ಜಿಲ್ಲಾಧಿಕಾರಿಗಳು ಬಳಸುವ ಕೆಎ 14 ಜಿ 1234 ನೊಂದಣಿಯ ಇನ್ನೋವಾ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
Shivamogga, December 5: The Second Senior Civil and JMFC Court of Shivamogga has issued an order to confiscate the government car of the Shivamogga District Magistrate for delay in providing compensation to a farmer.

