ಭದ್ರಾವತಿ (bhadravathi), ಜನವರಿ 7: ಬೆಳಿಗ್ಗೆಯ ವೇಳೆ ಮನೆ ಮುಂಭಾಗ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಮಹಿಳೆಯೋರ್ವರಿಗೆ, ಚಾಕು ತೋರಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕಡರನಾಯಕನಹಳ್ಳಿ ಸಮೀಪದ ಹೊಸಪಾಳ್ಯ ನಿವಾಸಿ ಪ್ರತಾಪ್ (25) ಬಂಧಿತ ಆರೋಪಿಯಾಗಿದ್ದಾನೆ. ಈತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಬಂಧಿತ ಆರೋಪಿಯಿಂದ ಚಾಕು, ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್, 75 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸರ್ಕಲ್ ಇನ್ಸ್’ಪೆಕ್ಟರ್ ನಾಗಮ್ಮ ಕೆ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಟಿ ರಮೇಶ್ ನೇತೃತ್ವದಲ್ಲಿ ಪಿಎಸ್ಐ ಕವಿತಾ, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ಆದರ್ಶ, ರವಿಕಿರಣ್, ಪ್ರಸನ್ನ, ಪ್ರಕಾಶ ಜಿ ಕೆ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 5-1-2026 ರಂದು ಜೇಡಿಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿತ್ತು. ಗೃಹಿಣಿ ಭಾಗ್ಯ (23) ಎಂಬುವರ ಮನೆ ಮುಂಭಾಗ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ದಿಢೀರ್ ಆಗಮಿಸಿದ ಆರೋಪಿಯು, ಚಾಕುವಿನಿಂದ ಬೆದರಿಸಿ ಸರ ಪಡೆದು ಪರಾರಿಯಾಗಿದ್ದ.
Bhadravati, January 7: Bhadravati New Town police have succeeded in arresting the accused who had threatened a woman who was cleaning in front of her house in the morning with a knife, snatched her mangalsutra and fled.

