ವರದಿ : ಬಿ. ರೇಣುಕೇಶ್
ಶಿವಮೊಗ್ಗ (shimoga), ಜನವರಿ 07: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡು, ಎರಡು ವರ್ಷವಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗುವುದು ಯಾವಾಗ? ಎಂಬುವುದು ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ!
ವಿಧಾನಸಭೆಯಲ್ಲಿ ಪ್ರಸ್ತಾಪ : ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವು ಕಳೆದ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ವಿಧಾನಸಭೆಯಲ್ಲಿ ಮಾತನಾಡಿದ್ದರು.
‘ಶಿವಮೊಗ್ಗ ಪಾಲಿಕೆಯ ಚುನಾಯಿತ ಸದ್ಯರ ಅವಧಿಯು 27/11/2023 ರಂದು ಮುಕ್ತಾಯಗೊಂಡಿದೆ. ಈ ಕುರಿತಂತೆ ಚುನಾವಣೆ ನಡೆಸುವ ಬಗ್ಗೆ 7-2-2024 ರಂದು ಸರ್ಕಾರಕ್ಕೆ ಅದಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದರೆ ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ವಾರ್ಡ್ ಗಳ ಮೀಸಲಾತಿ ಪ್ರಕ್ರಿಯೆಗಳು ಇನ್ನೂ ಅಂತಿಮ ಹಂತ ತಲುಪದಿರುವುದು ಚುನಾವಣೆ ವಿಳಂಬಕ್ಕೆ ಕಾರಣವಾಗಿದೆ. ಶಿವಮೊಗ್ಗ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಬೇಕು’ ಎಂದು ಶಾಸಕರು ಆಗ್ರಹಿಸಿದ್ದರು.
ಶಾಸಕ ಚನ್ನಬಸಪ್ಪರ ಪ್ರಶ್ನೆಗೆ ಸಚಿವ ಬಿ ಎಸ್ ಸುರೇಶ್ ಅವರು ಉತ್ತರಿಸಿ, ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸಿ, ವ್ಯಾಪ್ತಿ ಹೆಚ್ಚಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ 7/2/2024 ರಂದು ಪತ್ರ ಬರೆದು ಕೋರಿ, ಪ್ರಸ್ತಾವನೆ ನಿರೀಕ್ಷಿಸಲಾಗಿತ್ತು.
ಪಾಲಿಕೆಯಲ್ಲಿ 27/11/2023 ರಂದು ಚುನಾಯಿತ ಆಡಳಿತ ಮಂಡಳಿ ಅವಧಿಯು ಮುಕ್ತಾಯವಾಗಿರುತ್ತದೆ. ಆದರೆ ವ್ಯಾಪ್ತಿ ವಿಸ್ತರಣೆಯ ಪ್ರಸ್ತಾವನೆ ಕುರಿತು ಕ್ರಮವಾಗದೆ ಇರುವುದರಿಂದ, ಪ್ರಸ್ತುತ ವಾರ್ಡ್ ವಾರು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ’ ಎಂದು ಉತ್ತರಿಸಿದ್ದರು.
ವಿಳಂಬ : ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತದ ವ್ಯಾಪ್ತಿ ಪರಿಷ್ಕರಣೆ ಆರಂಭಿಸಲಾಗಿದೆ. ಸದರಿ ಪ್ರಕ್ರಿಯೆ ಆರಂಭಗೊಂಡು ವರ್ಷವೇ ಉರುಳಿದರೂ, ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲಾಡಳಿತದಿಂದ ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಇದು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.
ಈಗಾಗಲೇ ನಗರದಂಚಿನ ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಯಾವ್ಯಾವ ಪ್ರದೇಶಗಳನ್ನು, ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ವರದಿಯನ್ನು ಸಿದ್ದಪಡಿಸಲಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಸದರಿ ವರದಿಯಲ್ಲಿ ಕೈಬಿಡಲಾಗಿದ್ದ ವಿವಿಧ ಬಡಾವಣೆಗಳ ನಿವಾಸಿಗಳು, ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದರು.
ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ಆದರೆ ಹಲವು ತಿಂಗಳುಗಳೇ ಉರುಳಿದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತವು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಮಾಡಿಲ್ಲ. ಇದು ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಪರಿಷ್ಕರಣೆ ವಿಷಯ ಮುಂದಿಟ್ಟುಕೊಂಡೇ ವಾರ್ಡ್ ವಾರು ಚುನಾವಣೆಯು ವಿಳಂಬವಾಗುತ್ತಿರುವ ಮಾಹಿತಿಗಳು ಕೇಳಿಬರಲಾರಂಭಿಸಿದೆ.
ಡಿಸಿ ಗಮನಿಸಲಿ : ಈ ಹಿಂದಿನ ಡಿಸಿ ಗುರುದತ್ತ ಹೆಗಡೆ ಅವರು ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯ ಪ್ರಸ್ತಾಪವನ್ನು ಕಾಲಮಿತಿಯೊಳಗೆ ಸರ್ಕಾರಕ್ಕೆ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಈ ವಿಷಯದಲ್ಲಿ ಆಸಕ್ತಿವಹಿಸಲಿಲ್ಲವೆಂಬ ಆರೋಪ ಜನಮಾನಸದಲ್ಲಿದೆ.
ನೂತನ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರು ಈ ವಿಷಯದತ್ತ ಗಂಭೀರ ಚಿತ್ತ ಹರಿಸಬೇಕಾಗಿದೆ. ಈ ಹಿಂದೆ ಪೌರಾಡಳಿತ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವ ಅವರಿಗಿದೆ. ಇದನ್ನು ಬಳಸಿಕೊಂಡು ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಲಿದ್ದಾರೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
30 ವರ್ಷಗಳ ನಂತರ ನಡೆಯುತ್ತಿರುವ ನಗರಾಡಳಿತ ಪ್ರಕ್ರಿಯೆ!
*** ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಪಾಲಿಕೆ ಆಡಳಿತ ಸಿದ್ದಪಡಿಸಿರುವ ವರದಿಯಲ್ಲಿ, 9 ಗ್ರಾಮ ಪಂಚಾಯ್ತಿಯ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುವ ಚಿಂತನೆ ನಡೆಸಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೇ ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಈ ನಡುವೆ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ವಸತಿ ಬಡಾವಣೆಗಳನ್ನು, ಪಾಲಿಕೆ ಸಿದ್ದಪಡಿಸಿದ್ದ ವರದಿಯಲ್ಲಿ ಕೈಬಿಡಲಾಗಿತ್ತು. ಇದು ಬಡಾವಣೆಗಳ ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಸಮರ್ಪಕ ನಾಗರೀಕ ಸೌಲಭ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ನಾಗರೀಕರು, ತಮ್ಮ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಪ್ರಸ್ತುತ ಸಿದ್ದಪಡಿಸಿರುವ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸಲ್ಲಿಸುವಂತೆ ಈ ಹಿಂದಿನ ಜಿಲ್ಲಾಧಿಕಾರಿಗಳು ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
Shimoga, January 07: The process of revising the jurisdiction of Shimoga City Corporation began two years ago, but it has still not been completed. Due to the administration’s sheer negligence, the entire matter has been left in limbo. The big question that remains is: When will the proposal be submitted to the state government? #ShimogaUpdates, #ShimogaNews, #ShimogaEvents, #ShimogaBuzz, #ShimogaToday, #Shimoga, #NammaShimoga, #ShimogaDiaries, #ShimogaLife, #ShimogaCity,

