ಶಿವಮೊಗ್ಗ (shivamogga): ಭವಿಷ್ಯವನ್ನು ರೂಪಿಸುವ ಶಕ್ತಿ ವಿಭಿನ್ನ ಚಿಂತನೆಯಲ್ಲಿದ್ದು, ಸಾಧನೆಯ ಉತ್ತುಂಗದ ದಾರಿಯಾಗಿ ತೆರೆದುಕೊಳ್ಳಲಿದೆ ಎಂದು ಖ್ಯಾತ ಉದ್ಯಮಿ ನಿವೇದನ್ ನೆಂಪೆ ಹೇಳಿದರು.
ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ‘ಪರಿಚಯ-2026’ ಉದ್ಘಾಟಿಸಿ ಮಾತನಾಡಿದರು.
ಜನರು ನಿಮ್ಮ ಆಲೋಚನೆಯನ್ನು ನೋಡಿ ನಗುತ್ತಿದ್ದರೆ ಬೇಸರಪಡಬೇಡಿ. ಏಕೆಂದರೆ ನಿಮ್ಮ ಆಲೋಚನೆಯ ಅಲೆ, ಸಾಮಾನ್ಯರಿಗಿಂತ ಎತ್ತರದಲ್ಲಿದೆ ಎಂಬುದು ಅದರ ಸಂಕೇತ. ಇತಿಹಾಸದಲ್ಲಿ ಸಮಾಜವನ್ನು ಬದಲಿಸಿದ ಪ್ರತಿಯೊಂದು ವಿಭಿನ್ನ ಆಲೋಚನೆಗಳು ಆರಂಭದಲ್ಲಿ ಟೀಕೆ, ಹಾಸ್ಯ ಮತ್ತು ಅನುಮಾನಗಳಿಗೆ ಗುರಿಯಾಗಿದ್ದವು ಎಂಬುದು ನೆನಪಿಡಿ.
ಇಂದಿನ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ತಂತ್ರಜ್ಞಾನದ ಅರಿವು, ಸಂವಹನ ಕೌಶಲ್ಯತೆ ಮತ್ತು ನವೋದ್ಯಮದ ಮನೋಭಾವವು ಬೇಕಾಗಿದೆ. ಆದ್ದರಿಂದ ಯುವ ಸಮೂಹ ಪ್ರತಿದಿನ ಹೊಸ ಕೌಶಲ್ಯಗಳನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಂಪ್ರದಾಯಬದ್ಧ ಚೌಕಟ್ಟಿನಿಂದ ಹೊರಬಂದು ವಾಸ್ತವತೆಗೆ ಬೇಕಾದಂತೆ, ಸೃಜನಶೀಲವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ. ಉದ್ಯೋಗವನ್ನು ಹುಡುಕುವವರಾಗುವುದಕ್ಕಿಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರಾಗಿ. ಪೋಷಕರು ಅನಗತ್ಯ ಒತ್ತಡ ಹೇರದೆ, ಮಕ್ಕಳ ಆಸಕ್ತಿಗಳಿಗೆ ತಕ್ಕಂತೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಯುವ ಸಮೂಹವು ವಾಸ್ತವ ಜಗತ್ತಿನ ಅರಿವನ್ನು ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.
ಮೊಬೈಲ್‌ಗಳ ಅತಿಯಾದ ಬಳಕೆಯ ಮೋಹಕ್ಕೆ ಒಳಗಾಗಬೇಡಿ. ದಿನಪತ್ರಿಕೆಗಳು, ಪುಸ್ತಕಗಳು ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲಗಳ ಮೂಲಕ ಜ್ಞಾನವನ್ನು ವಿಸ್ತರಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಓದುವ ಅಭ್ಯಾಸವು ಉತ್ತಮ ಚಿಂತನೆ, ಸ್ಪಷ್ಟತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಿಸಿಎ, ಬಿಎಸ್ಸಿ ವಿಭಾಗದಲ್ಲಿ ಕುವೆಂಪು ವಿವಿಯ ರ‌್ಯಾಂಕ್ ಪಡೆದ 7 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ಲೇಸ್ಮೆಂಟ್ ಅಧಿಕಾರಿ ಪ್ರದೀಪ್.ಜಿ.ಎಸ್ ಉದ್ಯೋಗವಕಾಶಗಳ ಬಗ್ಗೆ ಹಾಗೂ ಆಯಿಶಾ ರೆಹಮಾನ್ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರಾದ ಡಾ.ಮುಕುಂದ ಸ್ವಾಗತಿಸಿ, ರೇಖಾ ವಂದಿಸಿ, ಲಕ್ಷ್ಮಣ್ ನಿರೂಪಿಸಿದರು.
Different thinking is the path to peak achievement: Entrepreneur Nivedan Nempe | Shivamogga: The power to shape the future lies in different thinking, which will open up as the path to peak achievement, said renowned entrepreneur Nivedan Nempe. He was speaking while inaugurating the orientation program ‘Parichaya-2026’ for first-year BCA and BSC students organized by the city’s S.R. Nagappashetty Memorial College of Applied Sciences (SRNM) at the Kuvempu Theatre on Friday. #shimoga #shivamogga #news #NewsUpdate #ಶಿವಮೊಗ್ಗ

