ಶಿವಮೊಗ್ಗ (shivamogga), ಜುಲೈ 11: ಬ್ಯಾಂಕ್ ಗಳಿಗೆ ನಕಲಿ ಬಂಗಾರ ಅಡಮಾನವಿಟ್ಟು ಲಕ್ಷಾಂತರ ರೂ. ಲೋನ್ ಪಡೆದು ವಂಚಿಸಿದ ಪ್ರಕರಣವೊಂದು ಶಿವಮೊಗ್ಗ ನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಮುಖ್ಯ ಆರೋಪಿ ತೀರ್ಥಹಳ್ಳಿ ತಾಲೂಕು ಬಿಳ್ಮನೆ ಅರೆಕಲ್ಲು ಗ್ರಾಮದ ನಿವಾಸಿ ಲೋಕೇಶ್ (39) ಎಂಬಾತನನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ನಾಲ್ವರು ಆರೋಪಿಗಳ ಬಂಧನವಾಗಬೇಕಾಗಿದೆ ಎಂದು ಪೊಲೀಸ್ ಇಲಾಖೆಯು ಜುಲೈ 11 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ದೂರು ದಾಖಲು : 03/07/2026 ರಂದು ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ದಾರವತೋ ಕ್ರಾಂತಿಕುಮಾರ್ ಎಂಬುವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಬ್ಯಾಂಕ್ ನಲ್ಲಿ ಬಂಗಾರ ಲೇಪಿತ ನಕಲಿ ಬಂಗಾರಗಳನ್ನು ಅಡಮಾನವಿಟ್ಟು ಗೋಲ್ಡ್ ಲೋನ್ ಪಡೆದು ವಂಚಿಸಲಾಗಿದೆ ಎಂದು ದೂರಿದ್ದರು. ಈ ಕುರಿತಂತೆ ದೊಡ್ಡಪೇಟೆ ಠಾಣಾ ಗುನ್ನೆ ನಂ. 239/2026 ಕಲಂ: 61(1), 318(4) ಸಹಿತ 3(5) ಬಿಎನ್ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಮುಖ್ಯ ಆರೋಪಿ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿ, ಸ್ವಇಚ್ಛಾ ಹೇಳಿಕೆ ನೀಡಿದ್ದ. ಅದರಂತೆ ಆರೋಪಿತನು ವಿವಿಧ ಬ್ಯಾಂಕ್ ಗಳು ಹಾಗೂ ಜ್ಯುವೆಲರಿ ಶಾಪ್ ನಲ್ಲಿ ಬಂಗಾರ ಲೇಪಿತ ನಕಲಿ ಆಭರಣಗಳಿಟ್ಟು ಗೋಲ್ಡ್ ಲೋನ್ ಪಡೆದಿರುವ ಮಾಹಿತಿ ನೀಡಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವರ : ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 163.300 ಗ್ರಾಂ ಅಡಮಾನವಿಟ್ಟು 7,62,557 ರೂ. ಸಾಲ.
ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ ನಿಯಮಿತದಲ್ಲಿ 75.844 ಗ್ರಾಂ ಅಡಮಾನವಿಟ್ಟು 9,33,000 ರೂ. ಸಾಲ.
ಶಿವಮೊಗ್ಗದ ಆಲ್ಕೋಳದ ಸಿರಿ ಸೌಹಾರ್ದ ಕ್ರೆಡಿಟ್ ಆಪರೇಟಿವ್ ಸಂಘದಲ್ಲಿ 75.01 ಗ್ರಾಂ ಅಡಮಾನವಿಟ್ಟು 7,43,000 ರೂ. ಸಾಲ.
ಶಿವಮೊಗ್ಗದ ಗೋಪಾಳದ ಡಿ.ಸಿ.ಸಿ ಬ್ಯಾಂಕ್ ಶಾಖೆಯಲ್ಲಿ 48.28 ಗ್ರಾಂ ಅಡವಿಟ್ಟು 1,79,000 ರೂ. ಸಾಲ ಮತ್ತು ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿರುವ ಇಂಡಿಯನ್ ಓವರ್ಸಿಸ್ ಬ್ಯಾಂಕ್ ನಲ್ಲಿ 26.490 ಗ್ರಾಂ ಅಡವಿಟ್ಟು 1,10,000 ರೂ. ಸಾಲ.
ಹಾಗೂ ಶಿವಮೊಗ್ಗದ ನೇತಾಜಿ ಸರ್ಕಲ್ ಬಳಿಯಿರುವ ಗುಲಾಬಿ ಜ್ಯುವೆಲರಿ ವರ್ಕ್ಸ್ ನಲ್ಲಿ 30.90 ಗ್ರಾಂ ಅಡಮಾನವಿಟ್ಟು 1,90,000 ರೂ. ಲೋನ್ ಸೇರಿದಂತೆ ಒಟ್ಟಾರೆ 419.824 ಗ್ರಾಂ ನಕಲಿ ಬಂಗಾರವಿಟ್ಟು 28,87,237 ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ಸ್’ಪೆಕ್ಟರ್ ಸತ್ಯನಾರಾಯಣ, ಪಿಎಸ್ಐ ನಾರಾಯಣ ಮಧುಗಿರಿ, ಎಎಸ್ಐ ಚೂಡಾಮಣಿ, ಸಿಬ್ಬಂದಿಗಳಾದ ಪುನೀತ್, ಸಂದೀಪ್, ಗುರುನಾಯ್ಕ, ರಾಜೇಶ್ ಗೌಡ ಪಾಟೀಲ್, ಪುಟ್ಟಮ್ಮ ಎನ್ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga: Banks defrauded of lakhs of rupees by pledging fake gold! | Shivamogga, July 11: A case of banks defrauded of lakhs of rupees by pledging fake gold to banks has come to light in Shivamogga city.

