ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಅಪಹರಣ – ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳಿಬ್ಬರಿಂದ ಕೃತ್ಯ!

ಶಿವಮೊಗ್ಗ : ಮಾಂಗಲ್ಯ ಸರ ಅಪಹರಣ - ಬೈಕ್ ನಲ್ಲಿ ಆಗಮಿಸಿದ ಸರಗಳ್ಳರಿಂದ ಕೃತ್ಯ!

ಶಿವಮೊಗ್ಗ, ಜು. 14: ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ಚಿಕ್ಕಲ್ ಬಡಾವಣೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಚಿಕ್ಕಲ್ ನಿವಾಸಿ ಲತಾ (50) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಹಿಂಬದಿಯಿಂದ ಆಗಮಿಸಿದ ಸರಗಳ್ಳರು ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಈ ವೇಳೆ ಅರ್ಧ ಸರ ಮಾತ್ರ ಕಳ್ಳರ ಪಾಲಾಗಿದ್ದು, ಉಳಿದ ಸರ ಉಳಿಸಿಕೊಳ್ಳುವಲ್ಲಿ ಲತಾರವರು ಸಫಲರಾಗಿದ್ದಾರೆ.

ಮಹಿಳೆಯು ಮನೆಯ ಸಮೀಪದ ಪಾರ್ಕ್ ವೊಂದರ ಬಳಿ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ, ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಸ್ಥಳವೊಂದರ ವಿಳಾಸ ಕೇಳುವ ನೆಪದಲ್ಲಿ ಅವರನ್ನು ನಿಲ್ಲಿಸಿದ್ದಾರೆ. ನಂತರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ 50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆ: ಮಾಂಗಲ್ಯ ಸರ ಅಪಹರಣದ  ಕೃತ್ಯವು ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಸರಗಳ್ಳರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *