ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ರಚನೆಗೆ ಸಿಎಂ ಸಮ್ಮತಿ

ಸುಳ್ಳು ಸುದ್ದಿ ಪತ್ತೆ – ನಿಯಂತ್ರಣ – ಕಠಿಣ ಶಿಕ್ಷೆಗೆ ಕ್ರಮ

ಬೆಂಗಳೂರು, ಆಗಸ್ಟ್ 21 : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಅವರು ಈ ತೀರ್ಮಾನ ಮಾಡಿದರು.

ಸುಳ್ಳು ಸುದ್ದಿಗಳ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಅನುಮೋದನೆ ನೀಡಿದರು.

ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆ :

ಪ್ಯಾಕ್ಟ್ ಚೆಕ್ ಘಟಕವು ಮೇಲುಸ್ತುವಾರಿ ಸಮಿತಿ, SOPC ಪರಿಶೀಲನೆ, ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಸತ್ಯ ತಪಾಸಣೆ ತಂಡ ವಿಶ್ಲೇಷಣ ತಂಡವನ್ನು ಒಳಗೊಳ್ಳಲಿದೆ. ಹಾಗೂ ಸಾಮರ್ಥ್ಯ ವರ್ಧನೆ ತಂಡ ರಚನೆ ಮಾಡಿ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡಬಹುದು ಎಂದು ಸಭೆಯಲ್ಲಿ ವಿವರಿಸಲಾಯಿತು.

ಬೆಂಗಳೂರು ಪೊಲೀಸ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದರೂ, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಅಗತ್ಯವಿದೆ. ಎಐ ಬಳಕೆ ಮಾಡಿ ಡೀಪ್ ಫೇಕ್ ಕೂಡ ಉಪಯೋಗ ಮಾಡಲಾಗುತ್ತಿದೆ. ಇದು ಸುಳ್ಳು ಸುದ್ದಿ ಹರಡುವವರಿಗೆ ಅನುಕೂಲ ವಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಫೇಕ್ ಸುದ್ದಿ ಜಾಲ ಜಾಗತಿಕವಾಗಿ ಬಾಲ್ಯಾವಸ್ಥೆಯಲ್ಲಿದ್ದರೂ ಕಾಲಾಂತರದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಯೂ ಇದೆ. ಸುಳ್ಳು ಸುದ್ದಿ ಬಳಕೆ ಮಾಡುವವರಿಗೆ ಶಿಕ್ಷೆ ಕೂಡ ಆಗಬೇಕು. ಈ ಸಮಿತಿ ಕೂಡಲೇ ರಚಿಸಿ ಸಾಮರ್ಥ್ಯ ಹೆಚ್ಚಿಸುವ ಕೆಲಸ ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಭಿಪ್ರಾಯಪಟ್ಟರು.

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅತ್ಯಗತ್ಯ. ಆರಂಭಿಕ ಹಂತದಲ್ಲಿ ಐ.ಟಿ ಬಿಟಿ ಇಲಾಖೆ ಸಹಕರಿಸುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ತರಲು ಕ್ರಮ ವಹಿಸಬೇಕು ನಂತರ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ ಎಂದು ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ಪಟ್ಟರು.

ಸಚಿವರಾದ ಕೃಷ್ಣಬೈರೇಗೌಡ ಅವರು ಮಾತನಾಡಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಯಿಂದ ಸುಳ್ಳುಸುದ್ದಿ ಹರಡುವುದನ್ನು ನಿಯಂತ್ರಿಸಿ ಇದು ಶಿಕ್ಷಾರ್ಹ ಅಪರಾಧ ಎಂದು ಜನರಿಗೆ ಮನವರಿಕೆಯಾಗಬೇಕು ಎಂದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್ , ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕ ರ್ ಉಪಸ್ಥಿತರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *