
shimoga railway news | ಕೊನೆಗೂ ಶಿವಮೊಗ್ಗ ಗೂಡ್ಸ್ ಶೆಡ್ ರೈಲ್ವೆ ನಿಲ್ದಾಣ ಸ್ಥಳಾಂತರಕ್ಕೆ ಸಿದ್ದವಾದ ವೇದಿಕೆ : ಸಚಿವರು ನೀಡಿದ ಖಡಕ್ ಸೂಚನೆಯೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆ. 27: ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿರುವ, ಗೂಡ್ಸ್ ಶೆಡ್ ವಿಭಾಗ ಸ್ಥಳಾಂತರಿಸಬೇಕೆಂಬ ಬಹು ಹಿಂದಿನ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ನಗರದ ಹೊರವಲಯ ಕೋಟೆಗಂಗೂರು ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕೋಚಿಂಗ್ ಡಿಪೋ ಟರ್ಮಿನಲ್ ಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.
ಸೆ. 26 ರ ಗುರುವಾರ ಕೋಟೆಗಂಗೂರು ರೈಲ್ವೆ ಟರ್ಮಿನಲ್ ಗೆ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (railway minister v somanna) ಭೇಟಿಯಿತ್ತು ಪರಿಶೀಲನೆ ನಡೆಸಿದ ವೇಳೆ, ರೈಲ್ವೆ ಗೂಡ್ಸ್ ಶೆಡ್ ಸ್ಥಳಾಂತರ ವಿಚಾರ ನೆನೆಗುದಿಗೆ ಬಿದ್ದಿರುವ ಸಂಗತಿಯನ್ನು ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ (mp b y raghavendra) ಗಮನಕ್ಕೆ ತಂದಿದ್ದಾರೆ.
‘ನಗರದ ಹೃದಯ ಭಾಗದಲ್ಲಿ ಗೂಡ್ಸ್ ಶೆಡ್ ನಿಲ್ದಾಣವಿದೆ. ಇದರಿಂದ ಸರಕು, ಸಾಗಾಣೆ ವೇಳೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ಕೋಟೆಗಂಗೂರು ನಿಲ್ದಾಣಕ್ಕೆ ಸ್ಥಳಾಂತರಿಸಬೇಕೆಂಬ ಪ್ರಸ್ತಾಪವಿದೆ’ ಎಂದು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸಚಿವ ವಿ ಸೋಮಣ್ಣ ಅವರು ಸ್ಥಳದಲ್ಲಿದ್ದ ರೈಲ್ವೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ‘ಕೋಟೆಗಂಗೂರು ನಿಲ್ದಾಣಕ್ಕೆ (kotegangur railway terminal) ಗೂಡ್ಸ್ ಶೆಡ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಿ. ಪ್ರಸ್ತುತ ನಡೆಯುತ್ತಿರುವ ಕೋಚಿಂಗ್ ಡಿಪೋ ಕಾಮಗಾರಿ ವೇಳೆಯೇ ಗೂಡ್ಸ್ ಶೆಡ್ ನಿರ್ಮಾಣಕ್ಕೂ ಕ್ರಮಕೈಗೊಳ್ಳಿ’ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇದೇ ವೇಳೆ ಸಂಸದರು ಮಾತನಾಡಿ, ‘ಗೂಡ್ಸ್ ಶೆಡ್ ನವೀಕರಣಕ್ಕೆ ಕೋಟ್ಯಾಂತರ ರೂ. ಅನುದಾನ ಮಂಜೂರಾಗಿದೆ. ಹಳೇ ಸ್ಥಳದಲ್ಲಿಯೇ ಕಾಮಗಾರಿ ನಡೆಸುವುದರಿಂದ ಹಣ ವ್ಯರ್ಥವಾಗಲಿದೆ. ಆ ಹಣವನ್ನು ಕೋಟೆಗಂಗೂರು ಟರ್ಮಿನಲ್ ಬಳಿ ನೂತನ ಗೂಡ್ಸ್ ಶೆಡ್ ಲೈನ್ ನಿರ್ಮಾಣಕ್ಕೆ ವಿನಿಯೋಗಿಸುವಂತೆ’ ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಸೂಚನೆ : ಸಂಸದರ ಅಭಿಪ್ರಾಯ ಆಲಿಸಿದ ಸಚಿವ ವಿ ಸೋಮಣ್ಣ ಅವರು, ‘ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು .ಸಬೂಬು ಹೇಳಬಾರದು. ಕೋಟೆಗಂಗೂರಿನಲ್ಲಿ ಜಾಗವಿದ್ದು, ಹಣ ಕೂಡ ಲಭ್ಯತೆಯಿದೆ. ಇಲ್ಲಿಯೇ ಗೂಡ್ಸ್ ಶೆಡ್ ವಿಭಾಗ ಮಾಡಲು ಕ್ರಮಕೈಗೊಳ್ಳಿ. ಇದರಿಂದ ಮುಖ್ಯ ರೈಲ್ವೆ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಕಡತಗಳಿಗೆ ತಕ್ಷಣವೇ ಅನುಮತಿ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
The long-standing demand to relocate the Goods Shed section in the main railway station premises of Shimoga has come to life again. If everything goes according to plan, there is a possibility that the railway coaching depot being constructed near Kotegangur on the outskirts of the city will be shifted to the terminal.