ಬೆಂಗಳೂರು (bengaluru), ಅ. 8: ಫ್ರಿಜ್ ನಲ್ಲಿಟ್ಟಿದ್ದ ತಂಗಳೂಟು ಹಾಗೂ ಕೇಕ್ ಸೇವಿಸಿದ್ದ ಬಾಲಕ ಮೃತಪಟ್ಟು, ದಂಪತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನ ಭುವನೇಶ್ವರಿ ನಗರದಲ್ಲಿ ನಡೆದಿದೆ.
ಧೀರಜ್ (5) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಲರಾಜ್ ಅವರು ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಪಿತೃ ಪಕ್ಷ ಪೂಜೆ ನಡೆಸಿದ್ದು, ಉಳಿದಿದ್ದ ಆಹಾರವನ್ನು ಫ್ರಿಜ್ ನಲ್ಲಿಟ್ಟಿದ್ದರು. ಹಾಗೆಯೇ ಗ್ರಾಹಕರಿಂದ ಆರ್ಡರ್ ಆಗಿ ರದ್ದಾಗಿದ್ದ ಕೇಕ್ ನ್ನು ಸಹ ಬಾಲರಾಜ್ ಮನೆಗೆ ತಂದು ಫ್ರಿಜ್ ನಲ್ಲಿರಿಸಿದ್ದರು.
ಕಳೆದ ಭಾನುವಾರ ರಾತ್ರಿ ಮೂವರು ಫ್ರಿಜ್ ನಲ್ಲಿಟ್ಟಿದ್ದ ಆಹಾರ ಹಾಗೂ ಕೇಕ್ ಸೇವಿಸಿ ಮಲಗಿದ್ದರು. ಸೋಮವಾರ ಮುಂಜಾನೆ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮೂವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಗಳು ಹೇಳಿವೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

