
shimoga | ಶಿವಮೊಗ್ಗ – ಕಲುಷಿತ ಕುಡಿಯುವ ನೀರು : ಹಿತರಕ್ಷಣಾ ವೇದಿಕೆಯ ಗಂಭೀರ ಆರೋಪವೇನು?
ಶಿವಮೊಗ್ಗ, ಅ. 14: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ, ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರೀ ಮಳೆಯಿಂದ ನೀರಿನಲ್ಲಿ ಟರ್ಬಿಡಿಟಿ ಹೆಚ್ಚಾಗಿ ಸಮಸ್ಯೆಯಾಗಿದೆ ಎಂದು ಜಲ ಮಂಡಳಿ ತಿಳಿಸಿತ್ತು.
ಆದರೆ ನಾಗರೀಕರ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಇದನ್ನು ತಳ್ಳಿ ಹಾಕಿದೆ. ಕಲುಷಿತ ನೀರು ಸರಬರಾಜಿಗೆ ನೀರು ಶುದ್ಧೀಕರಣ ಘಟಕದಲ್ಲಿನ ಅಸಮರ್ಪಕ ನಿರ್ವಹಣೆ ಕಾರಣವಾಗಿದೆ ಎಂದು ಆರೋಪಿಸಿದೆ.
ಈ ಸಂಬಂಧ ಅ. 14 ರ ಬೆಳಿಗ್ಗೆ ಘಟಕದ ಪ್ರಮುಖರು ಮಂಡ್ಲಿಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಭೇಟಿಯ ವೇಳೆ ಕಂಡುಬಂದ ವಿವರಗಳ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ವಿವರ ಈ ಮುಂದಿನಂತಿದೆ.
ಅಸಮರ್ಪಕ ನಿರ್ವಹಣೆ : ‘ಜಲ ಮಂಡಳಿ ಹೇಳುವಂತೆ, ಮಳೆ ಕಾರಣದಿಂದ ನೀರಿನಲ್ಲಿ ಅಧಿಕ ಮಣ್ಣಿನ ಅಂಶವಿದೆ’ ಎಂಬುವುದು ಬಹುತೇಕ ಸುಳ್ಳಾಗಿದೆ. ಕೊಳಚೆ ನೀರು ಸರಬರಾಜಿಗೆ ನಿರ್ವಹಣೆಯ ವೈಫಲ್ಯವೇ ಮುಖ್ಯ ಕಾರಣವಾಗಿದೆ’ ಎಂದು ವೇದಿಕೆ ಆರೋಪ ಮಾಡಿದೆ.
‘ಶುದ್ಧೀಕರಣ ಘಟಕದಲ್ಲಿರುವ 3 ಕ್ಲಾರಿ ಪ್ಲಕ್ಚುವೇಟರ್ ಕೆಲಸ ನಿಲ್ಲಿಸಿ 2 ತಿಂಗಳಾಗಿದೆ. ಇದರಿಂದ ಘಟಕದಲ್ಲಿ ಶೇ. 85 ರಷ್ಟು ನೀರು ಶುದ್ಧೀಕರಣವಾಗುತ್ತಿಲ್ಲ. ಲ್ಯಾಬ್ ಟೆಸ್ಟಿಂಗ್ ಉಪಕರಣಗಳು ಕಾರ್ಯನಿರ್ವಹಣೆ ಮಾಡುತ್ತಿಲ್ಲ. ನೀರು ಶುದ್ಧೀಕರಣಕ್ಕೆ ಆಲಂ ಸರಿಯಾಗಿ ಬಳಸುತ್ತಿಲ್ಲ.
ನೀರಿಗೆ ಕ್ಲೋರಿನ್ ಮಿಕ್ಸ್ ಮಾಡಲು ಅಳತೆಯ ಎರಡೂ ಗೇಜ್ ಗಳು ಹಾಳಾಗಿವೆ. ಅವೈಜ್ಞಾನಿಕವಾಗಿ ನೀರಿಗೆ ಕ್ಲೋರಿನ್ ಮಿಶ್ರಣ ಮಾಡಲಾಗುತ್ತಿದೆ. ಜಲ ಮಂಡಳಿಯ ನಿರ್ವಹಣೆಯಲ್ಲಿನ ವೈಫಲ್ಯದಿಂದ ಕೊಳಚೆ ನೀರು ಸರಬರಾಜಾಗಲು ಮುಖ್ಯ ಕಾರಣವಾಗಿದೆ’ ಎಂದು ವೇದಿಕೆ ಗಂಭೀರ ಆರೋಪ ಮಾಡಿದೆ.
ಘಟಕಕ್ಕೆ ಭೇಟಿ ನೀಡಿದ ತಂಡದಲ್ಲಿ ಕೆ.ವಿ.ವಸಂತಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ, ಆಶೋಕ ಕುಮಾರ, ಸೀತಾರಾಮ್, ಸುಬ್ರಮಣ್ಯ, ವಿನೊದ್ ಪೈ, ರಘಪತಿ ಮೊದಲಾದವರಿದ್ದರು.
In Shimoga city recently, there has been widespread outrage over the supply of contaminated drinking water. Water board said that turbidity in water is mostly a problem due to heavy rain. But the Federation of Civil Defense Forums rejected this. It blamed improper maintenance at the water treatment plant for the contaminated water supply.