
sigandur | ಸಿಗಂದೂರು : ಶರಾವತಿ ನದಿಯಲ್ಲಿ ಕಣ್ಮರೆಯಾಗಿದ್ದ ಮೂವರು ಯುವಕರ ಶವ ಪತ್ತೆ!
ಸಾಗರ (sagara), ನ. 14: ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ನದಿಯಲ್ಲಿ, ತೆಪ್ಪ ಮಗುಚಿ ಬಿದ್ದು ನೀರು ಪಾಲಾಗಿದ್ದ ಮೂವರು ಯುವಕರ ಶವಗಳು ನ. 14 ರ ಬೆಳಿಗ್ಗೆ ಪತ್ತೆಯಾಗಿವೆ.
ಚೇತನ್ ಜೈನ್ ಸಿಗಂದೂರು (28), ಸಂದೀಪ್ ಹುಲಿದೇವರಬನ (30) ಹಾಗೂ ರಾಜೀವ್ ಗಿಣಿವಾರ (34) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.
ನ. 13 ರಂದು ಐವರು ಯುವಕರು, ಕಳಸವಳ್ಳಿ ಸಮೀಪ ತೆಪ್ಪದ ಮೂಲಕ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಊಟಕ್ಕೆಂದು ತೆರಳಿದ್ದರು. ಊಟ ಮುಗಿಸಿಕೊಂಡು ಹಿಂದಿರುಗುವಾಗ ತೆಪ್ಪದಲ್ಲಿ ನೀರು ತುಂಬಿಕೊಂಡು ಮಗುಚಿ ಬಿದ್ದಿತ್ತು.
ಈ ವೇಳೆ ಇಬ್ಬರು ಯುವಕರು ಈಜಿಕೊಂಡು ದಡಕ್ಕೆ ಆಗಮಿಸುವಲ್ಲಿ ಸಫಲರಾಗಿದ್ದರು. ಉಳಿದ ಮೂವರು ಯುವಕರು ನದಿಯಲ್ಲಿ ಕಣ್ಮರೆಯಾಗಿದ್ದರು. ಇವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳ ತಂಡವು, ಹಿನ್ನೀರಿನಲ್ಲಿ ಸತತ ಕಾರ್ಯಾಚರಣೆ ನಡೆಸಿತ್ತು. ಆದರೆ ಯುವಕರ ಸುಳಿವು ಪತ್ತೆಯಾಗಿರಲಿಲ್ಲ. ನ. 14 ರ ಬೆಳಿಗ್ಗೆಯಿಂದಲೇ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಸುಮಾರು 40 ಅಡಿ ಆಳದಲ್ಲಿ ಮೂವರು ಯುವಕರ ಶವಗಳು ಪತ್ತೆಯಾಗಿವೆ. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
The dead bodies of three youths were found in the Sharavathi river at Kalasavalli near Sigandur in Sagar taluk, on the morning of November 14, after their raft had overturned and got into the water.