
bhadravati | ಭದ್ರಾವತಿ : ಪೂಜೆ ನೆಪದಲ್ಲಿ ಚಿನ್ನಾಭರಣ – ನಗದು ವಂಚಿಸಿ ಪರಾರಿಯಾದ ನಕಲಿ ಸ್ವಾಮೀಜಿ..!!
ಭದ್ರಾವತಿ (bhadravati), ನ. 22: ವಿಶೇಷ ಪೂಜೆ ಮಾಡಿ ಮನೆಗೆ ಒಳಿತು ಮಾಡುತ್ತೆನೆ ಹಾಗೂ ಮಾಟಮಂತ್ರದಿಂದ ಮುಕ್ತಿಗೊಳಿಸುತ್ತನೆ ಎಂದು ನಂಬಿಸಿದ ನಕಲಿ ಸ್ವಾಮೀಜಿಯೋರ್ವ, ಎರಡು ಮನೆಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಂಚಿಸಿ ಪರಾರಿಯಾದ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ನಯ ವಂಚನೆ : ಕೂಡ್ಲಿಗೆರೆ ಗ್ರಾಮದ ಮನೆಯೊಂದಕ್ಕೆ ಅಪರಿಚಿತನೋರ್ವ ಶಾಸ್ತ್ರ ಹೇಳುವ ನೆಪದಲ್ಲಿ ಆಗಮಿಸಿದ್ದಾನೆ. ವಿಶೇಷ ಪೂಜೆಯ ಮೂಲಕ ಮನೆಯಲ್ಲಿನ ಸಮಸ್ಯೆಗಳ ಪರಿಹಾರ ಮಾಡುವುದಾಗಿ ಹೇಳಿದ್ದಾನೆ. ನಯವಂಚಕನ ಮಾತನ್ನು ಕುಟುಂಬದವರು ನಂಬಿದ್ದಾರೆ.
ಜುಲೈ 23 ರಂದು ಮನೆಯ ಕೋಣೆಯೊಂದರಲ್ಲಿ ತಾನೊಬ್ಬನೆ ವಿಶೇಷ ಪೂಜೆಯ ನಾಟಕ ಮಾಡಿದ್ದಾನೆ. ಸುಮಾರು 3 ಲಕ್ಷ ರೂ. ಮೌಲ್ಯದ 47 ಗ್ರಾಂ ತೂಕದ ಚಿನ್ನಾಭರಣ ಹಾಗೂ 1. 50 ಲಕ್ಷ ನಗದು ಪಡೆದು, ಪೆಟ್ಟಿಗೆಯೊಂದರಲ್ಲಿಟ್ಟಿದ್ದಾನೆ. 41 ದಿನಗಳ ಬಳಿಕ ಪೆಟ್ಟಿಗೆ ತೆರೆಯಬೇಕು. ಪ್ರತಿನಿತ್ಯ ಪೂಜೆ ಮಾಡಬೇಕು ಎಂದು ಸೂಚಿಸಿದ್ದಾನೆ.
41 ದಿನಗಳ ನಂತರ ಮನೆಯವರು ವಂಚಕನ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ, ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಅನುಮಾನದಿಂದ ಪೆಟ್ಟಿಗೆ ತೆರೆದು ನೋಡಿದಾಗ, ನಕಲಿ ಅಭರಣಗಳಿರುವುದು ಗೊತ್ತಾಗಿದೆ. ನಂತರ ಕುಟುಂಬದವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೆಂಬರ್ 20 ರಂದು ದೂರು ದಾಖಲಿಸಿದ್ದಾರೆ.
ಮತ್ತೊಂದು ವಂಚನೆ : ಕೂಡ್ಲಿಗೆರೆ ಗ್ರಾಮದಲ್ಲಿ ನಡೆಸಿದ ನಯವಂಚನೆಯ ರೀತಿಯಲ್ಲಿಯೇ, ಅತ್ತಿಗುಂದ ಗ್ರಾಮದ ಮನೆಯೊಂದರಲ್ಲಿಯೂ ಪೂಜೆ ನೆಪದಲ್ಲಿ ವಂಚಕನು ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಂಚಿಸಿ ಪರಾರಿಯಾಗಿದ್ದಾನೆ.
ಮನೆಯಲ್ಲಿ ಸಮಸ್ಯೆಯಿದ್ದು, ಅದನ್ನು ವಿಶೇಷ ಪೂಜೆಯ ಮೂಲಕ ಪರಿಹರಿಸುತ್ತೆನೆ ಎಂದು ಹೇಳಿದ್ದಾನೆ. ಕುಟುಂಬದವರಿಂದ 40 ತೊಲ ಬಂಗಾರ ಹಾಗೂ ನಗದು ಹಣವನ್ನು ಪಡೆದಿದ್ದಾನೆ. ಮನೆ ಕೋಣೆಯೊಂದರಲ್ಲಿ ಏಕಾಂಗಿಯಾಗಿ ಪೂಜೆ ಮಾಡುವ ನಾಟಕವಾಡಿದ್ದಾನೆ.
ನಂತರ ಪೆಟ್ಟಿಗೆಯಲ್ಲಿ ನಕಲಿ ಬಂಗಾರಗಳಿಟ್ಟಿದ್ದಾನೆ. 48 ದಿನಗಳ ಕಾಲ ಸದರಿ ಪೆಟ್ಟಿಗೆ ಪೂಜಿಸಬೇಕು ಎಂದು ಸೂಚಿಸಿದ್ದಾನೆ. ಅದರಂತೆ 48 ದಿನಗಳ ನಂತರ ಕುಟುಂಬದವರು, ವಂಚಕನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದ್ದು, ಅನುಮಾನದಿಂದ ಪೆಟ್ಟಿಗೆ ತೆರೆದು ನೋಡಿದಾಗ ವಂಚನೆಗೊಳಗಾಗಿರುವುದು ಕುಟುಂಬದವರಿಗೆ ಗೊತ್ತಾಗಿದೆ.
ಕಳುವಾಗಿರುವ 23.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2. 25 ಲಕ್ಷ ನಗದನ್ನು ದೊರಕಿಸಿ ಕೊಡುವಂತೆ ನವೆಂಬರ್ 20 ರಂದು ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.
An incident in Bhadravati taluk where a fake Swami who believed that he would perform special puja and free the house from black magic, cheated two houses of gold jewelery and cash worth lakhs of rupees, has come to light.