
shimoga | ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇಎಸ್ಐ ಸರ್ವರ್ ಸಮಸ್ಯೆ : ಸಾರ್ವಜನಿಕರ ಪರದಾಟ – ಗಮನಹರಿಸುವರೆ ಸಿಎಂ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 6: ಇಎಸ್ಐ (ಕಾರ್ಮಿಕ ರಾಜ್ಯ ವಿಮಾ) ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆಯಿಂದ, ಕಳೆದ ಕೆಲ ದಿನಗಳಿಂದ ಆನ್’ಲೈನ್ ರೆಫರಲ್ ಸಿಗುತ್ತಿಲ್ಲ. ಇದರಿಂದ ಇಎಸ್ಐ ಕಾರ್ಡ್ ಹೊಂದಿದವರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಆಗದೆ, ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ!
ಇಎಸ್ಐ ಕಾರ್ಡ್ ಹೊಂದಿದವರು ಹಾಗೂ ಅವರ ಕುಟುಂಬ ಸದಸ್ಯರು, ಇಎಸ್ಐ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಇಎಸ್ಐ ಆಸ್ಪತ್ರೆಯಿಂದ ಆನ್’ಲೈನ್ ರೆಫರಲ್ ಪಡೆಯುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆ ನಂತರವಷ್ಟೆ ನೊಂದಾಯಿತ ಖಾಸಗಿ ಆಸ್ಪತ್ರೆಗಳು, ಚಿಕಿತ್ಸೆ ಪ್ರಕ್ರಿಯೆ ಆರಂಭಿಸುತ್ತವೆ. ರೋಗಿಗೆ ಯಾವುದೇ ಚಿಕಿತ್ಸಾ ವೆಚ್ಚ ಭರಿಸುವುದಿಲ್ಲ. ಇಎಸ್ಐ ಸಂಸ್ಥೆಯಿಂದ ಚಿಕಿತ್ಸಾ ವೆಚ್ಚ ಪಡೆದುಕೊಳ್ಳುತ್ತವೆ.
ಸದ್ಯ ಇಎಸ್ಐ ಜೊತೆ ನೊಂದಾವಣೆಯಾಗಿರುವ ಖಾಸಗಿ ಆಸ್ಪತ್ರೆಗಳ ಲಿಂಕ್ ಓಪನ್ ಆಗುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆನ್’ಲೈನ್ ರೆಫರಲ್ ಲಭ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಇದರಿಂದ ಇಎಸ್ಐ ಕಾರ್ಡ್ ಹೊಂದಿದವರಿಗೆ, ನೊಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಹಣ ಭರಿಸುವಂತೆ ಸೂಚಿಸಲಾಗುತ್ತಿದೆ. ಇದರಿಂದ ಕೆಲ ನಾಗರೀಕರು ಇಎಸ್ಐ ಕಚೇರಿ – ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.
ಮತ್ತೊಂದೆಡೆ, ಖಾಸಗಿ ಆಸ್ಪತ್ರೆಗಳು ಫಾರಂ – 5 ನೀಡಿದರೆ ಇಎಸ್ಐ ಆಸ್ಪತ್ರೆ ದೃಢೀಕರಿಸಿ ಕೊಡುತ್ತದೆ. ರೋಗಿಗೆ ಚಿಕಿತ್ಸೆ ನೀಡಿದ ನಂತರ, ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳು ಫಾರಂ – 5 ನೀಡುತ್ತಿಲ್ಲ. ಕಡ್ಡಾಯವಾಗಿ ಆನ್’ಲೈನ್ ರೆಫರಲ್ ತರುವಂತೆ ಸೂಚಿಸುತ್ತಿವೆ ಎಂದು ಕೆಲ ನಾಗರೀಕರು ಅಳಲು ತೋಡಿಕೊಳ್ಳುತ್ತಾರೆ.
ಸದ್ಯ ಸರ್ವರ್ ಸಮಸ್ಯೆ ಸರಿಯಾಗುವ ತನಕವಾದರೂ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಕೈಯಲ್ಲಿ ರೆಫರಲ್ ಬರೆದುಕೊಡುವ ವ್ಯವಸ್ಥೆ ಮಾಡಬೇಕು. ಇದನ್ನು ಖಾಸಗಿ ಆಸ್ಪತ್ರೆಗಳು ಪರಿಗಣಿಸುವಂತೆ ಸೂಚನೆ ನೀಡಬೇಕು ಕೆಲ ನಾಗರೀಕರು ಆಗ್ರಹಿಸಿದ್ದಾರೆ.
ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಇಲಾಖೆ ಸಚಿವರು ಇತ್ತ ಗಮನಹರಿಸಬೇಕಾಗಿದೆ. ಇಎಸ್ಐ ಆನ್’ಲೈನ್ ರೆಫರಲ್ ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ಇಎಸ್ಐ ಕಾರ್ಡ್ ದಾರರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ.
Shimoga, March 6: Due to server problem in ESI (Employment State Insurance) hospitals, online referral is not available for the last few days. Due to this, ESI card holders are not able to get treatment in private hospitals! To get treatment in ESI registered private hospitals, it is mandatory to get online referral from ESI hospital. No treatment cost to the patient.