news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
ಶಿವಮೊಗ್ಗ (shivamogga), ಡಿಸೆಂಬರ್ 18: ಕುಟುಂಬ ಸದಸ್ಯರು ಸ್ಥಿರಾಸ್ತಿ ಹಂಚಿಕೆ ಮಾಡಿಕೊಳ್ಳುವ ವಿಭಾಗ ಪತ್ರ ನೊಂದಣಿ ವ್ಯವಸ್ಥೆಯಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸಲು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಡಿಸೆಂಬರ್ 17 ರಂದು ಬೆಳಗಾವಿಯ ಸುವರ್ಣಸೌಧದ ವಿಧಾನಪರಿಷತ್ ನಲ್ಲಿ ಡಿ.ಎಸ್. ಅರುಣ್ ಅವರು ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ. ಈ ಕುರಿತಂತೆ ಶಾಸಕರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ವಿವರ ಮುಂದಿನಂತಿದೆ.
ಕುಟುಂಬ ಸದಸ್ಯರ ಸಂಕಷ್ಟ : ಕಾವೇರಿ – 2 ವ್ಯವಸ್ಥೆಯನ್ನು ಇ–ಸ್ವತ್ತು ಜೊತೆ ಸಂಯೋಜಿಸಿದ ನಂತರ, ವಿಭಾಗ ಪತ್ರಗಳ ಮೂಲಕ ಆಸ್ತಿ ನೋಂದಣಿಯಲ್ಲಿ ಗಂಭೀರ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಪಾರಂಪರಿಕ ಸ್ಥಿರಾಸ್ತಿಗಳ ವರ್ಗಾವಣೆ ಸಾಧ್ಯವಾಗದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಎರಡು ಪ್ರಮುಖ ಸಾಫ್ಟ್’ವೇರ್ ಗಳ ಸಂಯೋಜನೆ ವೇಳೆ, ಸರ್ವರ್ ಸಾಮರ್ಥ್ಯ ಹೆಚ್ಚಿಸದಿರುವುದೇ ಈ ಸಮಸ್ಯೆಗಳ ಮೂಲ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದರಿಂದ ಸರ್ಕಾರದ ರಾಜಸ್ವ ಮೂಲಕ್ಕೂ ಧಕ್ಕೆಯಾಗುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಮೊದಲ ಬಾರಿಗೆ ಉಪ ನೋಂದಣಿ ಕಚೇರಿಗೆ ಬರುವವರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು, ಕಾವೇರಿ–2 ಹಾಗೂ ಇ–ಸ್ವತ್ತು ಸಂಯೋಜನೆಯಿಂದ ಉಂಟಾಗಿರುವ ಸರ್ವರ್ ಮತ್ತು ಖಾತಾ ವಿಭಜನೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಜೊತೆಯಲ್ಲಿ ಚಕ್‌ಬಂದಿ ಪ್ರಕ್ರಿಯೆಯಲ್ಲಿ ನಗರಸಭೆಗಳು ಮುನ್ನಡೆ ವಹಿಸಿ ಸಾರ್ವಜನಿಕರಿಗೆ ಸಹಕಾರ ನೀಡಲು ಆರ್‌ಡಿಪಿಆರ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸರ್ವರ್ ಸಮಸ್ಯೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಡೀಡ್ ರೈಟರ್‌ಗಳಿಗೆ ಫಲಾನುಭವಿಗಳು / ಸಾರ್ವಜನಿಕರ ವಿವರಗಳನ್ನು ಅಪ್‌ಲೋಡ್ ಮಾಡುವ ಅವಕಾಶ ನೀಡುವ ಬಗ್ಗೆ ಸಹ ಪರಿಗಣಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ತ್ವರಿತ ಪರಿಹಾರ ದೊರೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ಧಾರೆ.
Shivamogga, December 18: Legislative Council MLA DS Arun has urged the state government to rectify the confusion that has arisen in the division deed registration system through which family members divide immovable property. On December 17, D.S. Arun raised the issue and spoke at the Legislative Council of Suvarna Soudha in Belgaum. Information about this has been given in a press release issued by the MLA’s office. The details are as follows.
