ಶಿವಮೊಗ್ಗ (shivamogga), ಆಗಸ್ಟ್ 05: ರೂಪ ಕಣ್ಣುಗಳಿಗೆ ಸೀಮಿತವಾದರೆ, ಗುಣವು ಆತ್ಮವನ್ನು ಸ್ಪರ್ಶಿಸಿ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ಆದ್ದರಿಂದ ವ್ಯಕ್ತಿಯ ಸೌಂದರ್ಯವು ಬಾಹ್ಯ ರೂಪದಲ್ಲಲ್ಲ, ಉತ್ತಮ ಗುಣಗಳಲ್ಲಿ ಅಡಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಗ್ರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದ ಬಿಬಿಎ, ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕವಾಗಿ ಬೆಳೆಯುವ ಅವಕಾಶವನ್ನು ಎನ್ಇಎಸ್ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರೌಢಿಮೆಗೆ ತಲುಪಿಸಲು ನಿರಂತರ ಚಿಂತನೆ ಹಾಗೂ ಅಭ್ಯಾಸ ಅಗತ್ಯ. ಇಂದಿನ ಸಮಾಜಕ್ಕೆ ಕೌಶಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದ್ದು, ಸಮಾಜದೊಂದಿಗೆ ಬೆರೆತು ಬದುಕುವ ಗುಣವನ್ನು ಬೆಳೆಸಿಕೊಳ್ಳಬೇಕು.
ಆಧುನಿಕ ಯುಗದಲ್ಲಿ ಸಂಬಂಧಗಳು ಕಡಿಮೆಯಾಗುತ್ತಿದೆ. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಾಗ ಮಾತ್ರ ವಿದ್ಯೆ ಎಂಬುದು ಸಾರ್ಥಕ. ಎಲ್ಲಿ ಒಳ್ಳೆಯ ಸಂಸಾರವಿದೆ ಅಲ್ಲಿ ಒಳ್ಳೆಯ ಸಂಸ್ಕಾರವಿದೆ. ಭಾಷೆ ನಗಣ್ಯವಾದಾಗ, ಸಂಸ್ಕೃತಿ ಸಂಸ್ಕಾರವು ನಗಣ್ಯವಾಗುತ್ತದೆ. ನಮ್ಮ ಮಾತೃಭಾಷೆ, ಪಕೃತಿಯ ಬಗ್ಗೆ ಕಾಳಜಿವಹಿಸಬೇಕು. ಕುಟುಂಬ ಜೀವನ ಪದ್ದತಿಗೆ ಆದ್ಯತೆ ನೀಡಿ. ಮನಸ್ಸುಗಳನ್ನು ಕಟ್ಟುವ ಕಾರ್ಯ ಯುವ ಸಮೂಹದಿಂದ ನಡೆಯಲಿ.
ಒಬ್ಬ ವ್ಯಕ್ತಿಯ ಇರುವಿಕೆ ವಾತಾವರಣದಲ್ಲಿ ಸಂತೋಷವನ್ನು ನೀಡುವಂತಿರಬೇಕು ವಿನಃ, ಅವರ ನಿರ್ಗಮನದಿಂದ ಸಂತೋಷ ಉಂಟಾಗುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಡಿ. ಹಾಗಾಗಿಯೇ ವ್ಯಕ್ತಿತ್ವದ ಪ್ರಖರತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ. ಭಾಷೆಯ ವಿದ್ವತ್ತನ್ನು ಪಡೆಯಲು ದಿನಪತ್ರಿಕೆಗಳನ್ನು ಓದಿ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಆಚಾರ್ಯ ತುಳಸಿ ಕಾಲೇಜು ತನ್ನದೇ ಆದ ಸಮೃದ್ಧ ಇತಿಹಾಸ ಮತ್ತು ಮೌಲ್ಯಾಧಾರಿತ ಶಿಕ್ಷಣ ಪರಂಪರೆಯನ್ನು ಹೊಂದಿದೆ. ಜೈನ ಸಂತರಾದ ಆಚಾರ್ಯ ತುಳಸಿ ಅವರು ಮಲೆನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎನ್.ಇ.ಎಸ್. ಸಂಸ್ಥೆಯ ಶಿಕ್ಷಣ ಸೇವೆಯ ಆಶಯಗಳನ್ನು ಮೆಚ್ಚಿ, ಅಂದಿನ ಕಾಲದಲ್ಲೇ ಸುಮಾರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದರು. ಅವರ ಉದಾರ ಸೇವಾ ಮನೋಭಾವ ಮತ್ತು ಶಿಕ್ಷಣದ ಮೇಲಿನ ಬದ್ಧತೆಯ ಸ್ಮರಣಾರ್ಥ ಕಾಲೇಜಿಗೆ ‘ಆಚಾರ್ಯ ತುಳಸಿ ಕಾಲೇಜು’ ಎಂದು ನಾಮಕರಣ ಮಾಡಲಾಗಿದೆ.
ಕಾಲೇಜಿನಲ್ಲಿ ಸಹಪಾಠಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಪರಸ್ಪರ ಕಲಿಕೆಯ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಈ ವಿಧಾನದಿಂದಲೇ ಉತ್ತಮ ಶೈಕ್ಷಣಿಕ ಫಲಿತಾಂಶಗಳು, ಸಾಧಕರು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳು ವಿದ್ಯಾಸಂಸ್ಥೆಯಿಂದ ರೂಪುಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದೆ, ಕೇವಲ ಪದವಿ ಪಡೆದು ಸಮಾಜಕ್ಕೆ ಕಾಲಿಟ್ಟರೆ, ನಿರೀಕ್ಷೆಗಳು ಮತ್ತು ವಾಸ್ತವದ ನಡುವೆ ಭ್ರಮನಿರಸನ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರಶಾಂತ್ ನಾಯಕ್ ಮಾತನಾಡಿ, ಜ್ಞಾನ ಮತ್ತು ಕೌಶಲ್ಯವೇ ನಿಜವಾದ ಸಂಪತ್ತು. ಇಂದಿನ ಜಗತ್ತಿನಲ್ಲಿ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯ ಅತ್ಯಂತ ಮೌಲ್ಯಯುತ ಆಸ್ತಿ. ಪ್ರೀತಿ, ವಿಶ್ವಾಸ, ಸಂಸ್ಕೃತಿ ಮತ್ತು ಮಾನವೀಯತೆ ಇಲ್ಲದ ಶಿಕ್ಷಣ ಅಪೂರ್ಣವಾಗಿದ್ದು, ಅಂಕಗಳು ಜೀವನದ ಒಂದು ಭಾಗ ಮಾತ್ರ; ನಿಜವಾದ ಯಶಸ್ಸು ಜ್ಞಾನ, ಕೌಶಲ್ಯ, ಮಾನವೀಯತೆ ಮತ್ತು ಉತ್ತಮ ವ್ಯಕ್ತಿತ್ವದಿಂದ ಬರುತ್ತದೆ.
ಮೊಬೈಲ್ ರಹಿತ ದಿನಾಚರಣೆ ಆಚರಿಸಿ
ಇಂದು ಪ್ರೀತಿ, ಸ್ನೇಹ, ತಂದೆ-ತಾಯಿ ಸೇರಿದಂತೆ ವಿವಿಧ ಸಂಬಂಧಗಳಿಗೆ ಮೀಸಲಾದ ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಆದರೆ ಇಂತಹ ದಿನಾಚರಣೆಗಳು ಕೇವಲ ಔಪಚಾರಿಕತೆಗೆ ಸೀಮಿತವಾಗಿದೆ. ಸಂಬಂಧಗಳನ್ನು ಗೌರವಿಸುವುದು ಮತ್ತು ಪ್ರೀತಿಸುವುದು ನಮ್ಮ ಬದುಕಿನ ನಿತ್ಯೋತ್ಸವವಾಗಬೇಕು. ನಿಜವಾಗಿಯು ಆಚರಿಸುವುದಾದರೆ ಕಾಲೇಜಿನಲ್ಲಿ ಒಂದು ದಿನ ಮೊಬೈಲ್ ರಹಿತ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಿ. ಅದರಿಂದ ಮನಸ್ಸು ಉತ್ಸಾಹಭರಿತವಾಗಿರಲಿದೆ, ಒಳ್ಳೆಯ ನಿದ್ದೆ ಬರಲಿದೆ ಎಂದು ಕುವೆಂಪು ವಿವಿ ಕನ್ನಡ ಪ್ರಾಧ್ಯಾಪಕರಾದ ಪ್ರಶಾಂತ್ ನಾಯಕ್ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿಶೇಷಾಧಿಕಾರಿ ಡಾ.ಆರ್.ಎಂ.ಜಗದೀಶ್, ಐಕ್ಯೂಎಸಿ ಸಂಚಾಲಕರಾದ ಕೆ.ಅನುಪಮ ಸೇರಿದಂತೆ ವಿವಿಧ ವಿದ್ಯಾರ್ಥಿ ವೇದಿಕೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದಲ್ಲಿ ವಿವಿಧ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
Shivamogga, August 05: While appearance is limited to the eyes, quality touches the soul and gives true meaning to life. Therefore, the beauty of a person lies not in the external appearance, but in good qualities, said G.S. Narayana Rao, Chairman of the National Education Committee. He was speaking after inaugurating the comprehensive activities organized by the Acharya Tulsi National College of Commerce, Shivamogga, at the Kuvempu Theatre on Wednesday and the welcome program for the first-year BBA and BCom students admitted.

