ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆಗಸ್ಟ್ 07: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ‘ಆಯುಕ್ತರ ಸರ್ಕಾರಿ ವಸತಿ ಗೃಹ’ ಇದೀಗ ವಿವಾದದ ಕೇಂದ್ರಬಿಂಧುವಾಗಿ ಪರಿಣಮಿಸಿದೆ. ಹಾಲಿ ಹಾಗೂ ಈ ಹಿಂದಿನ ಆಯುಕ್ತರ ನಡುವೆ ಹಗ್ಗಜಗ್ಗಾಟಕ್ಕೆ ಎಡೆ ಮಾಡಿಕೊಟ್ಟಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ!
ಈ ಹಿಂದೆ ಪ್ರಾಧಿಕಾರದ ಆಯುಕ್ತರಾಗಿದ್ದ ವಿಶ್ವನಾಥ್ ಪಿ ಮುದಜ್ಜಿ ಅವರನ್ನು11-03-2026 ರಂದು ವರ್ಗಾವಣೆಗೊಳಿಸಲಾಗಿತ್ತು. ಅವರ ವರ್ಗಾವಣೆಯಿಂದ ತೆರವಾದ ಪ್ರಾಧಿಕಾರದ ಆಯುಕ್ತ ಸ್ಥಾನಕ್ಕೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಆರ್ ಮಂಜುನಾಥ್ ರವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.
ನಿಯಮಾನುಸಾರ ವರ್ಗಾವಣೆಗೊಂಡ ಎರಡ್ಮೂರು ವಾರಗಳಲ್ಲಿ ಸರ್ಕಾರಿ ವಸತಿ ಗೃಹವನ್ನು ತೆರವುಗೊಳಿಸಬೇಕು. ಆದರೆ ವಿಶ್ವನಾಥ್ ಪಿ ಮುದಜ್ಜಿ ಅವರು ವರ್ಗಾವಣೆಗೊಂಡು ನಾಲ್ಕು ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೂ, ಗೋಪಾಲಗೌಡ ಬಡಾವಣೆಯಲ್ಲಿರುವ ಪ್ರಾಧಿಕಾರದ ಆಯುಕ್ತರಿಗೆಂದೇ ಮೀಸಲಾದ ಸರ್ಕಾರಿ ವಸತಿ ಗೃಹ ತೆರವುಗೊಳಿಸಿಲ್ಲ.
ಇದರಿಂದ ಹಾಲಿ ಆಯುಕ್ತರಿಗೆ ಇಲ್ಲಿಯವರೆಗೂ ಸರ್ಕಾರಿ ವಸತಿ ಗೃಹ ಲಭ್ಯವಾಗಿಲ್ಲ. ಇದರಿಂದ ಅವರು ಕಳೆದ ಹಲವು ತಿಂಗಳುಗಳಿಂದ ಅವರು ಸರ್ಕಾರಿ ಪ್ರವಾಸಿ ಮಂದಿರ, ಹೋಟೆಲ್ ಲಾಡ್ಜ್ ಕೊಠಡಿಗಳಲ್ಲಿ ಬೀಡುಬಿಡುವಂತ ದುಃಸ್ಥಿತಿ ಎದುರಾಗಿದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡುತ್ತವೆ.
ನೋಟೀಸ್ : ಸರ್ಕಾರಿ ನಿವಾಸ ತೆರವುಗೊಳಿಸುವಂತೆ ಈ ಹಿಂದಿನ ಆಯುಕ್ತರಿಗೆ, ಹಾಲಿ ಆಯುಕ್ತರು ಮೂರು ನೋಟಿಸ್ ಹೊರಡಿಸಿದ್ದಾರೆ. ಆದಾಗ್ಯೂ ಅವರು ಮನೆ ಖಾಲಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಅಂತಿಮ ಹಂತದ ನೋಟಿಸ್ ಹೊರಡಿಸಿದ್ದು, ಮನೆ ತೆರವುಗೊಳಿಸದಿದ್ದರೆ ಬಲವಂತವಾಗಿ ಮನೆ ಖಾಲಿ ಮಾಡಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂಬ ಮಾಹಿತಿ ಪ್ರಾಧಿಕಾರದ ಮೂಲಗಳು ತಿಳಿಸುತ್ತವೆ.
ಸಂಘಟನೆಯ ದೂರು : ಮತ್ತೊಂದೆಡೆ ಪ್ರಾಧಿಕಾರದ ಆಯುಕ್ತರ ನಿವಾಸದಿಂದ ಈ ಹಿಂದಿನ ಆಯುಕ್ತರನ್ನು ತೆರವುಗೊಳಿಸುವಂತೆ ಸಂಘಟನೆಯೊಂದು ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿ ಒತ್ತಾಯಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಷ್ಟೆಲ್ಲದರ ಹೊರತಾಗಿಯೂ ಈ ಹಿಂದಿನ ಆಯುಕ್ತರು ಮನೆ ಖಾಲಿ ಮಾಡಿಲ್ಲ. ಮತ್ತೊಂದೆಡೆ ಹಾಲಿ ಆಯುಕ್ತರು ಮನೆ ಖಾಲಿ ಮಾಡುವಂತೆ ನೋಟಿಸ್ ಮೇಲೆ ನೋಟಿಸ್ ಹೊರಡಿಸುತ್ತಿದ್ದಾರೆ. ಮುಂದೆನಾಗುವುದೊ ಕಾದು ನೋಡಬೇಕಾಗಿದೆ.
ಬಲವಂತವಾಗಿ ಮನೆ ಖಾಲಿ ಮಾಡಿಸುವ ಎಚ್ಚರಿಕೆ..!
*** ‘ಹಲವು ಬಾರಿ ನೋಟಿಸ್ ನೀಡಿದರೂ ಮನೆ ಖಾಲಿ ಮಾಡಿಲ್ಲ. ನಿಯಮಾನುಸಾರ ನೀಡಬೇಕಾದ ನಾಲ್ಕು ತಿಂಗಳ ಬಾಡಿಗೆ ಹಣವನ್ನು ಪ್ರಾಧಿಕಾರಕ್ಕೆ ಸಂದಾಯ ಮಾಡಿಲ್ಲ. ಈ ಕಾರಣದಿಂದ ಬಲವಂತವಾಗಿ ನಿಮ್ಮನ್ನು ಮನೆಯಿಂದ ತೆರವುಗೊಳಿಸಲಾಗುವುದು…!’ ಎಂದು ಹಾಲಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಅವರು ಈ ಹಿಂದಿನ ಆಯುಕ್ತರಿಗೆ ಹೊರಡಿಸಿರುವ ನೋಟಿಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸುತ್ತವೆ.
ಕುತೂಹಲ ಮೂಡಿಸಿದ ಜಿಲ್ಲಾಧಿಕಾರಿಗಳ ನಡೆ!
*** ಸರ್ಕಾರಿ ವಸತಿ ಗೃಹಕ್ಕಾಗಿ ಪ್ರಾಧಿಕಾರದ ಆಯುಕ್ತರ ನಡುವೆ ನಡೆಯುತ್ತಿರುವ ತಿಕ್ಕಾಟವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಇದೆಲ್ಲದರ ನಡುವೆ ಈ ವಿವಾದದ ಕುರಿತಂತೆ ಜಿಲ್ಲಾಧಿಕಾರಿಗಳು ಪ್ರಾಧಿಕಾರದಿಂದ ಮಾಹಿತಿ ಕೇಳಿದ್ದಾರೆನ್ನಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ.
‘Government House’ tug-of-war between current and former Commissioners of Shivamogga–Bhadravati Urban Development Authority! | Shivamogga, August 07: The Commissioner’s Government Residential Quarters of the Shivamogga–Bhadravati Urban Development Authority has now become the epicenter of controversy. A curious development has sparked a tug-of-war between the present and former Commissioners! Earlier, Commissioner Vishwanath P. Mudajji was transferred on 11-03-2026. Following his transfer, the vacant post of Commissioner was filled by B. R. Manjunath, who was serving in Bengaluru, as per the order issued by the State Government.

