
shimoga | ಶಿವಮೊಗ್ಗ : ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳು ಬಾಧೆ – ರೈತರಿಗೆ ಕೃಷಿ ಇಲಾಖೆ ಸಲಹೆಯೇನು?
ಶಿವಮೊಗ್ಗ (shivamoggga), ಅ. 5: ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳು ಬಾಧೆ ಕಂಡುಬಂದಿರುತ್ತದೆ. ಸಾಮಾನ್ಯವಾಗಿ ಕಂದು ಜಿಗಿ ಹುಳು ಅತಿ ಶೀಘ್ರದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಭಿವೃದ್ಧಿಯಾಗಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ ಆದ್ದರಿಂದ ರೈತರು ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಂದು ಜಿಗಿ ಬಾಧೆಯಲ್ಲಿ ಹುಳುಗಳು ಸಸ್ಯದ ಬುಡ ಭಾಗದಲ್ಲಿ ರಸ ಹೀರಿ ಬೆಳೆಯನ್ನು ಸುಟ್ಟಂತೆ ಮಾಡಿ ಸಂಪೂರ್ಣವಾಗಿ ನಾಶಪಡಿಸುತ್ತದೆ. ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ತೆಂಡೆಗಳು ಕ್ರಮೇಣ ಒಣಗಿದಂತಾಗಿ ಭತ್ತದ ತಾಕಿನಲ್ಲಿ ಅಲ್ಲಲ್ಲಿ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತೆ ಕಾಣುತ್ತದೆ. ಸಾಮಾನ್ಯವಾಗಿ ಇದನ್ನು ಜಿಗಿ ಸುಡು ಅಥವಾ ಹಾಪರ್ ಬರ್ನ್ ಎಂದು ಕರೆಯುತ್ತಾರೆ. ದಿನಗಳೆದಂತೆ ಮರಿಹುಳುಗಳಿಗೆ ರೆಕ್ಕೆಗಳು ಬಂದು ಮುಂದಿನ ತಾಕುಗಳಿಗೆ ಜಿಗಿದು ಆ ಬೆಳೆಯನ್ನೂ ಸಹ ನಾಶಪಡಿಸುತ್ತದೆ.
ಹತೋಟಿ ಕ್ರಮಗಳು : ಹುಳುವಿನ ಹತೋಟಿಗೆ ಮಾನೋಕ್ರೋಟೋಫಾಸ್ 36 ಎಸ್ ಎಲ್ ಪ್ರತಿ ಲೀಟರ್ ನೀರಿಗೆ 2 ಮಿಲಿ ಅಥವಾ ಕ್ಲೋರೋಪೈರಿಫಾಸ್ 20 ಇಸಿ ಪ್ರತಿ ಲೀಟರ್ ನೀರಿಗೆ 2ಮಿಲಿ ಅಥವಾ ಇಮಿಡಾ ಕ್ಲೋಪ್ರಿಡ್ 17.8 ಎಸ್ ಎಲ್ 0.6 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಬುಫ್ರೋಫೆಜಿನ್ ಪ್ರತಿ ಲೀಟರ್ ನೀರಿಗೆ 2 ಮಿಲಿ ಬೆರಸಿ ಗಿಡದ ಬುಡಭಾಗ ನೆನೆಯುವಂತೆ ಸಿಂಪಡಿಸಬೇಕು.
ಎಕರೆಗೆ 300 ರಿಂದ 350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ತೆನೆ ಬರುವ ಮೊದಲು ಇದರ ಬಾಧೆ ಕಂಡು ಬಂದಲ್ಲಿ ಎಕರೆಗೆ 5 ಕೆಜಿ ಫೋರೇಟ್ ಅಥವಾ 8 ಕೆಜಿ ಕಾರ್ಬೋಫ್ಯೂರಾನ್ ಹರಳನ್ನು ಬಳಸಿ ತಡೆಯಬಹುದಾಗಿದೆ.
ಎಚ್ಚರಿಕೆ ಕ್ರಮಗಳು : ಸಿಂಪರಣೆ ಮಾಡುವಾಗ ಗದ್ದೆಯಲ್ಲಿನ ನೀರನ್ನು ಸಂಪೂರ್ಣವಾಗಿ ಬಸಿದು ಹೊರ ತೆಗೆಯಬೇಕು. ಗದ್ದೆಯಿಂದ ಗದ್ದೆಗೆ ನೀರು ಹಾಯಿಸಬಾರದು ಮತ್ತು ಯೂರಿಯಾ ರಸಗೊಬ್ಬರ ಬಳಸಬಾರದು. ಯಾವುದೇ ಕಾರಣಕ್ಕೂ ಬಾಧೆಗೊಳಗಾದ ಭತ್ತದ ಬೆಳೆಗೆ ಮಿಥೈಲ್ ಪ್ಯಾರಾಥಿಯಾನ್ ಅಥವಾ ಸಿಂಥೆಟಿಕ್ ಪೈರಿಥ್ರಾಯ್ಡ್ ರಾಸಾಯನಿಕಗಳನ್ನು ಬಳಸಬಾರದು.
ಪ್ರತಿ 10 ಸಾಲಿಗೆ (8 ರಿಂದ 10 ಅಡಿ) ಪೂರ್ವ – ಪಶ್ಚಿಮವಾಗಿ ಪಾತಿ ಮಾಡಿ (ಇಕ್ಕಲು ತೆಗೆದು) ಗಾಳಿಯಾಡುವಿಕೆ ಉತ್ತಮಗೊಳಿಸಿ ಗಿಡದ ಬುಡಕ್ಕೆ ಸಿಂಪರಣೆ ಮಾಡುವುದು. ದಿನನಿತ್ಯ ಗದ್ದೆಯ ಪರಿವೀಕ್ಷಣೆ ಅತಿ ಮುಖ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಕಿರಣ್ ಕುಮಾರ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
In the villages of Shimoga district, paddy crop has been affected by brown bollworm. The agriculture department has advised the farmers to be careful as the brown bollworm usually develops in lakhs of numbers very quickly and completely destroys the paddy crop.