
shimoga | ಶಿವಮೊಗ್ಗ : ಜಮೀನಿನಲ್ಲಿ ಗಾಂಜಾ ಬೆಳೆದವನಿಗೆ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಮಾ. 17: ಜಮೀನಿನಲ್ಲಿ ಗಾಂಜಾ ಗಿಡ ಬೆಳೆದಿದ್ದಕ್ಕೆ ಹಾಗೂ ಒಣ ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿಗೆ, ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾರ್ಚ್ 17 ರಂದು ತೀರ್ಪು ನೀಡಿದೆ.
ಸೊರಬ ತಾಲೂಕು ಚಿಟ್ಟೂರು ಗ್ರಾಮದ ನಿವಾಸಿಯಾದ ನಿಂಗರಾಜ್ ಬಿನ್ ಶಿವಪ್ಪ (47) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗಾಂಜಾ ಬೆಳೆದಿದ್ದಕ್ಕೆ 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
ಹಾಗೆಯೇ 300 ಗ್ರಾಂ ತೂಕದ ಒಣ ಗಾಂಜಾ ಹೊಂದಿದ್ದಕ್ಕೆ 6 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ 1 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎ ಎನ್ ಸುರೇಶ್ ಅವರು ವಾದ ಮಂಡನೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ನಿಂಗರಾಜ್ ತನ್ನ ಶುಂಠಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಖಚಿತ ವರ್ತಮಾನದ ಮೇರೆಗೆ ಸೊರಬ ವಲಯ ಅಬಕಾರಿ ನಿರೀಕ್ಷಕರ ನೇತೃತ್ವದ ತಂಡ 8-9-2022 ರಂದು ದಾಳಿ ನಡೆಸಿದ್ದರು.
ಜಮೀನಿನಲ್ಲಿ ಬೆಳೆದಿದ್ದ 5 ರಿಂದ 6 ಅಡಿ ಎತ್ತರದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Shivamogga, March 17: The Principal District and Sessions Court of Shivamogga on March 17 sentenced a person to rigorous imprisonment for growing marijuana plants on land and possessing dry marijuana.