
shimoga | ಶಿವಮೊಗ್ಗ : ಪ್ರತಿಷ್ಠಿತ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಯುಜಿಡಿ ಅವ್ಯವಸ್ಥೆ – ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಆಕ್ರೋಶ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾ. 23: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್, ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ, ಯುಜಿಡಿ (ಒಳಚರಂಡಿ) ವ್ಯವಸ್ಥೆಯೇ ಇಲ್ಲವಾಗಿದೆ! ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಗಿದ್ದು, ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, ಜೆ ಹೆಚ್ ಪಟೇಲ್ ಬಡಾವಣೆ ರಚನೆ ಮಾಡಿತ್ತು. ಬಡಾವಣೆ ನಿರ್ಮಾಣಗೊಂಡು ಸರಿಸುಮಾರು 30 ವರ್ಷವಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಬಡಾವಣೆಯ ಹಲವೆಡೆ ಯುಜಿಡಿ ಸಂಪರ್ಕವೇ ಕಲ್ಪಿಸಿಲ್ಲವಾಗಿರುವುದು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಸದರಿ ಬಡಾವಣೆಯಲ್ಲಿ ನೂರಾರು ಮನೆಗಳು ನಿರ್ಮಾಣವಾಗಿದ್ದು, ಸಾವಿರಾರು ಜನರು ವಾಸಿಸುತ್ತಿದ್ದಾರೆ. ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಬಡಾವಣೆಗಳಲ್ಲೊಂದಾಗಿದೆ. ಬಡಾವಣೆಗೆ ಹೊಂದಿಕೊಂಡಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಜನವಸತಿ ಪ್ರದೇಶಗಳು ಅಭಿವೃದ್ದಿಯಾಗಿವೆ.
ಆದರೆ ಬಡಾವಣೆಯಲ್ಲಿ ಯುಜಿಡಿಯಂತ ಅಗತ್ಯ ಮೂಲಸೌಕರ್ಯ ವ್ಯವಸ್ಥೆಯಿಲ್ಲವಾಗಿದೆ. ನಮ್ಮದಲ್ಲದ ತಪ್ಪಿಗೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ಯುಜಿಡಿ ಸಂಪರ್ಕ ಕಲ್ಪಿಸಲು ಬಡಾವಣೆ ಮೂಲಕ ಹಾದು ಹೋಗಿರುವ ತುಂಗಾ ಮೇಲ್ದಂಡೆ ನಾಲೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ನೆಪ ಮುಂದಿಟ್ಟುಕೊಂಡು ಯುಜಿಡಿ ಸೌಲಭ್ಯ ಕಲ್ಪಿಸದೆ ಸತಾಯಿಸುತ್ತಿದ್ದಾರೆ.
ಪ್ರಸ್ತುತ ಕೆಲ ಮನೆಯವರು ಶೌಚಾಲಯದ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದಾರೆ. ಇದರಿಂದ ಬಡಾವಣೆಯ ಹಲವೆಡೆ ದುರ್ನಾತ ಬೀರುತ್ತಿದೆ. ಪ್ರಸ್ತುತ ಬೇಸಿಗೆಯ ಸಮಯವಾಗಿರುವುದರಿಂದ ದುರ್ನಾತದ ಪ್ರಮಾಣ ಮತ್ತಷ್ಟು ಹೆಚ್ಚುವಂತಾಗಿದೆ. ಮೂಗು ಮುಚ್ಚಿಕೊಂಡು ಓಡಾಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆ, ನೊಣ ಸೇರಿದಂತೆ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗುವಂತಾಗಿದೆ ಎಂದು ನಿವಾಸಿಗಳು ದೂರುತ್ತಾರೆ.
ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ಜೆ ಹೆಚ್ ಪಟೇಲ್ ಬಡಾವಣೆಯತ್ತ ಚಿತ್ತ ಹರಿಸಬೇಕಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ವಸ್ತುಸ್ಥಿತಿಯ ಅವಲೋಕನ ನಡೆಸಬೇಕಾಗಿದೆ. ತುಂಗಾ ಮೇಲ್ದಂಡೆ ನಾಲೆಯ ಬಳಿ ವೈಜ್ಞಾನಿಕವಾಗಿ ಒಳಚರಂಡಿ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಇಲ್ಲವೇ, ನಾಲೆ ಮೇಲ್ಭಾಗದಿಂದ ಪೈಪ್ ಲೈನ್ ಮೂಲಕ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ರವಾನಿಸುವ ವ್ಯವಸ್ಥೆ ಮಾಡಬೇಕು.
ಕಾಲಮಿತಿಯೊಳಗೆ ಬಡಾವಣೆಯಲ್ಲಿನ ಪ್ರತಿಯೊಂದ ಮನೆಗೂ, ಒಳಚರಂಡಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿದೆ. ಈ ಮೂಲಕ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ನಡೆಸಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.
Shivamogga, Mar 23: In J H Patel Layout, Ward 1 of Shivamogga Municipal Corporation, one of the prestigious areas of the city, there is no UGD (sewerage) system! Due to this, the citizens are facing severe problems and are cursing the administration.
The Shivamogga-Bhadravati Urban Development Authority had created the JH Patel Layout. It has been almost 30 years since the layout was built. But the fact that UGD connection has not been provided in many parts of the layout till now is a sign of the administration’s gross negligence, locals complain.