
shimoga | ಪೋಷಕತ್ವದಿಂದ ವಂಚಿತರಾದ ಬಡ ಬಾಲಕಿಯರಿಗೆ ಆಶ್ರಯ ಕಲ್ಪಿಸಲು ನೆರವಾದ ಪೊಲೀಸ್ ಸಿಬ್ಬಂದಿಗೆ ಸನ್ಮಾನ
ಶಿವಮೊಗ್ಗ (shivamogga), ಆಗಸ್ಟ್ 11: ಪೋಷಕತ್ವದಿಂದ ವಂಚಿತರಾದ ಇಬ್ಬರು ಅಪ್ರಾಪ್ತ ವಯಸ್ಸಿನ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ, ಮಕ್ಕಳ ಕಲ್ಯಾಣ ಸಮಿತಿ ಮೂಲಕ ಆಶ್ರಯ ಕಲ್ಪಿಸಲು ನೆರವಾದ, ಹೊಳೆಹೊನ್ನೂರು ಪೊಲೀಸ್ ಠಾಣೆ ಹೆಡ್ ಕಾನ್ಸ್’ಟೇಬಲ್ ಆನಂದ್ ಹೆಚ್ ವಿ ಅವರ ಕಾರ್ಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಈ ನಡುವೆ ಪೊಲೀಸ್ ಸಿಬ್ಬಂದಿಯ ಸಮಾಜಮುಖಿ ಕಾರ್ಯ ಮೆಚ್ಚಿ, ಆಗಸ್ಟ್ 11 ರಂದು ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಸದರಿ ಪೊಲೀಸ್ ಸಿಬ್ಬಂದಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಉತ್ತಮ ಕಾರ್ಯಕ್ಕೆ ಅಭಿನಂದಿಸಿದ್ದಾರೆ.
ಉತ್ತಮ ಕಾರ್ಯ : ಆಗಸ್ಟ್ 4 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮನೆ ಮನೆ ಪೊಲೀಸ್ ಕಾರ್ಯಕ್ರಮದಡಿ, ಆನಂದ್ ಹೆಚ್ ವಿ ಅವರು ಗ್ರಾಮಸ್ಥರ ಅಹವಾಲು ಆಲಿಸುತ್ತಿದ್ದರು.
ಈ ವೇಳೆ 9 ಹಾಗೂ 3 ವರ್ಷ ವಯೋಮಾನದ ಇಬ್ಬರು ಹೆಣ್ಣು ಮಕ್ಕಳು, ಪೋಷಕತ್ವದಿಂದ ವಂಚಿತರಾಗಿರುವ ಮಾಹಿತಿ ಅವರ ಗಮನಕ್ಕೆ ಬಂದಿತ್ತು. ಸುಮಾರು 1 ವರ್ಷದ ಹಿಂದೆ ಸದರಿ ಬಾಲಕಿಯರ ತಂದೆ – ತಾಯಿ ವಿಧಿವಶರಾಗಿದ್ದ ಸಂಗತಿ ಗೊತ್ತಾಗಿತ್ತು.
ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸಲು ನಿರ್ಧರಿಸಿದ ಆನಂದ್ ಹೆಚ್ ವಿ ಅವರು, ಭದ್ರಾವತಿಯ ಡಾನ್ ಬಾಸ್ಕೋ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಂಗನಾಥ್ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದರು.
ಸದರಿ ಸಂಸ್ಥೆಯ ಮೂಲಕ ಪುಟ್ಟ ಹೆಣ್ಣು ಮಕ್ಕಳನ್ನು, ಶಿವಮೊಗ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿ, ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮಾನವೀಯ ಕಾರ್ಯ ನಡೆಸಿದ್ದರು.
Shivamogga, August 11: The work of Holehonnur Police Station Head Constable Anand H. V., who helped provide shelter to two minor girls from a poor family who were deprived of parental care, through the Child Welfare Committee, has been highly appreciated.
Meanwhile, in appreciation of the social work of the police personnel, a felicitation program was organized by the District Police Department at the SP office in Shimoga on August 11.