ಶಿವಮೊಗ್ಗ (shivamogga), ನವೆಂಬರ್ 20: ಶಿವಮೊಗ್ಗದ ಆರ್’ಎಂಎಲ್ ನಗರದ ಮಾರ್ನಾಮಿಬೈಲ್ ನಲ್ಲಿ ಹರೀಶ್ ಎಂಬ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೊಡ್ಡಪೇಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬುದ್ದನಗರದ ನಿವಾಸಿ ಅರ್ಮಾನ್ (21), ಸಿಗೇಹಟ್ಟಿ ಬಡಾವಣೆ ನಿವಾಸಿ ನಿರಂಜನ್ (20) ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ.
ಭಾರೀ ಹೈಡ್ರಾಮಾ! : ಹರೀಶ್ (35) ಮೇಲೆ ನಡೆದಿದ್ದ ಹಲ್ಲೆ ಪ್ರಕರಣವು ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಅನ್ಯ ಕೋಮಿನವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಶಾಸಕ ಚನ್ನಬಸಪ್ಪರವರು ಪೊಲೀಸರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ರಾಷ್ಟ್ರಭಕ್ತರ ಬಳಗ ಸಂಘಟನೆಯು ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು.
ಹರೀಶ್ ಮೇಲೆ ನಡೆದಿದ್ದ ಹಲ್ಲೆಯ ಸಿಸಿ ಕ್ಯಾಮರಾ ದೃಶ್ಯಾವಳಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ನಡುವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಓರ್ವ ಹೊರತುಪಡಿಸಿದರೆ, ಇತರೆ ಇಬ್ಬರು ಅನ್ಯ ಧರ್ಮದವರಲ್ಲ.
ಹಾಗೆಯೇ ಪೊಲೀಸ್ ವಿಚಾರಣೆ ವೇಳೆ, ಗುರಾಯಿಸಿ ನೋಡಿದ್ದೆ ಹಲ್ಲೆಗೆ ಕಾರಣವಾಗಿದೆ ಎಂಬ ವಿಚಾರವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದರಿಂದ ಕೆಲ ರಾಜಕಾರಣಿಗಳು ಆರೋಪಿಸುವಂತೆ, ಇದು ಕೋಮು ವೈಷಮ್ಯದ ಹಲ್ಲೆಯಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ಸ್ಪಷ್ಟಪಡಿಸುತ್ತವೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ?
*** ಮೂವರು ಆರೋಪಿಗಳು ರಸ್ತೆ ಬದಿ ಕುಳಿತುಕೊಂಡಿದ್ದು, ನಡೆದುಕೊಂಡು ಬರುತ್ತಿದ್ದ ಹರೀಶ್ ಅವರನ್ನು ಗುರಾಯಿಸಿ ನೋಡಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಅಪ್ರಾಪ್ತ ಬಾಲಕ ಸೇರಿದಂತೆ ಇತರೆ ಇಬ್ಬರು ಹರೀಶ್ ಅವರಿಗೆ ನಿಂದಿಸಿದ್ದಾರೆ. ಈ ವೇಳೆ ಕೈ ಕೈ ಮಿಲಾವಣೆಯಾಗಿದೆ. ನಂತರ ಆರೋಪಿಗಳು ಹರೀಶ್ ಅವರನ್ನು ಬೆನ್ನಟ್ಟಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
ಇನ್ಸ್’ಪೆಕ್ಟರ್ ರವಿ ಪಾಟೀಲ್ ಅವರ ಶಿಸ್ತುಬದ್ದ ತನಿಖೆ!

*** ರಾಜಕೀಯ ಒತ್ತಡ ಹಾಗೂ ಕೋಮು ಬಣ್ಣ ಪಡೆದುಕೊಂಡಿದ್ದ ಸದರಿ ಪ್ರಕರಣವನ್ನು, ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್ ಅವರು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲವೆಂದು ಆರೋಪಿಸಲಾಗಿತ್ತು. ಎಫ್ಐಆರ್ ದಾಖಲಿಸಿಕೊಂಡಿಲ್ಲವೆಂದು ದೂರಲಾಗಿತ್ತು. ಆದರೆ ರವಿ ಪಾಟೀಲ್ ಅವರು ಪ್ರಕರಣದ ಎಲ್ಲ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಇದು ಕೋಮು ವೈಷಮ್ಯದ ಹಲ್ಲೆಯಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
Shivamogga, November 20: The Doddapet police have succeeded in arresting three accused in connection with the assault on a youth named Harish at Marnamibail in R’ML Nagar, Shivamogga.

