congress politics | ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ : ಶಿವಮೊಗ್ಗ ಜಿಲ್ಲೆಯ ‘ಕೈ’ ಶಾಸಕರ ಚಿತ್ತ ಯಾರತ್ತ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 22: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಬೆನ್ನಲ್ಲೇ, ಕಾಂಗ್ರೆಸ್ ನಲ್ಲಿ ಬಣ ರಾಜಕಾರಣ ಕಾವೇರ ತೊಡಗಿದೆ. ಒಂದೆಡೆ, ‘ಸಿಎಂ’ ಹುದ್ದೆಯಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಿಎಂ ಗದ್ದುಗೆಗಾಗಿ ಡಿ ಕೆ ಶಿವಕುಮಾರ್ ಶತ ಪ್ರಯತ್ನ ಆರಂಭಿಸಿದ್ದಾರೆ!
ಈ ನಡುವೆ ಡಿ ಕೆ ಶಿವಕುಮಾರ್ ಬೆಂಬಲಿಗ ಶಾಸಕರು, ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಬಳಿ ಲಾಬಿ ಆರಂಭಿಸಿದ್ದಾರೆ. ಇನ್ನೊಂದೆಡೆ, ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಕೂಡ ಪ್ರತಿತಂತ್ರ ರೂಪಿಸಲಾರಂಭಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣದ ಶಾಸಕರ ಗುಪ್ತ ಸಭೆಗಳು ಬಿಸುರುಗೊಂಡಿವೆ.
ಬಣ ರಾಜಕಾರಣ ಚಟುವಟಿಕೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ, ಶಾಸಕರ ಸಂಖ್ಯಾಬಲ ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿದೆ. ಕಾಂಗ್ರೆಸ್ ನ ಯಾವ ಶಾಸಕರು, ಯಾವ ಬಣದೊಂದಿಗೆ ಒಲವು ಹೊಂದಿದ್ದಾರೆಂಬ ಚರ್ಚೆಗಳು ಕೈ ಪಾಳೇಯದಲ್ಲಿ ನಡೆಯಲಾರಂಭಿಸಿದೆ.
ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಮೂವರು ವಿಧಾನಸಭೆ ಸದಸ್ಯರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರಿದ್ದಾರೆ. ಇದರಲ್ಲಿ ಸೊರಬ ಕ್ಷೇತ್ರದ ಶಾಸಕರೂ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ ಕೆ ಸಂಗಮೇಶ್ವರ ಹಾಗೂ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರುರವರು ವಿಧಾನಸಭೆ ಶಾಸಕರಾಗಿದ್ದಾರೆ.
ಸದ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬಣ ರಾಜಕಾರಣ ದಿನಕ್ಕೊಂದು ತಿರುವು ಪಡೆಯಲಾರಂಭಿಸಿದೆ. ಕೆಲ ಸಚಿವರು, ಶಾಸಕರು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪರ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯ ಈ ಮೂವರು ಶಾಸಕರು ಪ್ರಸ್ತುತ ಯಾವ ಬಣದೊಂದಿಗೂ ನೇರವಾಗಿ ಕಾಣಿಸಿಕೊಂಡಿಲ್ಲ.
ಈ ಹಿಂದಿನ ರಾಜಕೀಯ ಒಡನಾಟ – ಚಟುವಟಿಕೆಗಳ ಚಿತ್ರಣ ಗಮನಿಸಿದರೆ, ಮಧು ಬಂಗಾರಪ್ಪ ಮತ್ತು ಗೋಪಾಲಕೃಷ್ಣ ಬೇಳೂರುರವರು ಡಿಸಿಎಂ ಡಿ ಕೆ ಶಿವಕುಮಾರ್ ಜೊತೆ ಹಾಗೂ ಬಿ ಕೆ ಸಂಗಮೇಶ್ವರವರು ಸಿಎಂ ಸಿದ್ದರಾಮಯ್ಯರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುವುದು ಕಂಡುಬರುತ್ತದೆ.
ಯಾರತ್ತ ಒಲವು? : ಸಿಎಂ ಗದ್ದುಗೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತಂತೆ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ತಮ್ಮದೆ ಆದ ಅಭಿಪ್ರಾಯ ವ್ಯಕ್ತಪಡಿಸಲಾರಂಭಿಸಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಒಂದು ವೇಳೆ ಸಿಎಂ ಹುದ್ದೆ ಆಯ್ಕೆಗೆ ಶಾಸಕರ ಬಲಾಬಲ ಪರೀಕ್ಷೆಗೆ ಕಾಂಗ್ರೆಸ್ ಹೈ ಕಮಾಂಡ್ ಮುಂದಾದರೆ, ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರು ಯಾರತ್ತ ಒಲವು ವ್ಯಕ್ತಪಡಿಸಲಿದ್ದಾರೆ? ಯಾರ ಒಲವು ಯಾವ ನಾಯಕರತ್ತ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಇಬ್ಬರೂ ನಾಯಕರ ಪರವಾಗಿದ್ದಾರೆ ಸಾಕಷ್ಟು ಬೆಂಬಲಿಗರು!
*** ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಾಳೇಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಪರವಾಗಿ ಸಾಕಷ್ಟು ಸಂಖ್ಯೆಯ ಅಭಿಮಾನಿ, ಬೆಂಬಲಿಗರಿದ್ದಾರೆ. ಹುಟ್ಟುಹಬ್ಬ ಆಚರಣೆ ಮಾಡುವುದು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನ ಮಾಡಿಕೊಂಡು ಬರುತ್ತಿದ್ದಾರೆ.
Factional politics are at its peak in the Congress. On one hand, Siddaramaiah is trying to continue as the CM. On the other hand, DK Shivakumar has started a relentless effort to become the CM!
