shimoga rain news | ಮಲೆನಾಡಲ್ಲಿ ಮುಂದುವರಿದ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ : ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ!

shimoga tunga river

ವರದಿ : ಬಿ ರೇಣುಕೇಶ್

ಶಿವಮೊಗ್ಗ (shivamogga), ಜುಲೈ 25: ಮಲೆನಾಡಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಮುಂದುವರಿದಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಪರಿಣಾಮ ಬೀರುವಂತಾಗಿದೆ.

ಜುಲೈ 25 ರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1770.75 (ಗರಿಷ್ಠ ಮಟ್ಟ : 1819) ಅಡಿಯಿದೆ. 23,706 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1806.40 ಅಡಿಯಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ ಸರಿಸುಮಾರು 36 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.

ಒಟ್ಟಾರೆ 151.64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಪ್ರಸ್ತುತ 40.58 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 112.81 ಟಿಎಂಸಿ ನೀರು ಸಂಗ್ರಹವಾಗಿತ್ತು.

ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ಡ್ಯಾಂನ ಹಾಲಿ ನೀರಿನ ಮಟ್ಟ 152 ಅಡಿ 1 ಇಂಚು (ಗರಿಷ್ಠ ಮಟ್ಟ – 186) ಅಡಿಯಿದೆ. 6472 ಕ್ಯೂಸೆಕ್ ಒಳಹರಿವಿದ್ದು, 176 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಸಂಗ್ರಹದ ಪ್ರಮಾಣ 180 ಅಡಿ 6 ಇಂಚು ಇತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂ ನೀರಿನ ಸಂಗ್ರಹದಲ್ಲಿ ಸರಿಸುಮಾರು 28 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟಾರೆ ನೀರು ಸಂಗ್ರಹಣೆ ಸಾಮರ್ಥ್ಯ 71.535 ಟಿಎಂಸಿಯಾಗಿದೆ. ಪ್ರಸ್ತುತ 35.982 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 64.777 ಟಿಎಂಸಿ ನೀರು ಸಂಗ್ರಹವಾಗಿತ್ತು.

ಉಳಿದಂತೆ ಈಗಾಗಲೇ ಕಳೆದ ಕೆಲ ವಾರಗಳ ಹಿಂದೆಯೇ ತುಂಗಾ ಡ್ಯಾಂ ಗರಿಷ್ಠ ಮಟ್ಟ ತಲುಪಿದ್ದು, ನೀರು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನ ಒಳಹರಿವು 19,541 ಕ್ಯೂಸೆಕ್ ಇದ್ದು, 19,772 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಧಾರಾಕಾರ ಕಣ್ಮರೆ : ಮಲೆನಾಡಿನಲ್ಲಿ ಜುಲೈ ತಿಂಗಳಲ್ಲಿ ಅದರಲ್ಲಿಯೂ ಮಧ್ಯಂತರದ ವೇಳೆ ಭಾರೀ ಮಳೆಯಾಗುತ್ತದೆ. ಆದರೆ ಸದ್ಯ ಧಾರಾಕಾರ ಮಳೆ ಕಣ್ಮರೆಯಾಗಿದೆ. ಕೆಲವೆಡೆ ಮಳೆಯಾಗುತ್ತಿದ್ದರೂ ತೀವ್ರತೆಯಿಲ್ಲ. ಮತ್ತೆ ಕೆಲವೆಡೆ ಆಗಾಗ್ಗೆ ಮಳೆ ಬೀಳುತ್ತಿದ್ದು, ಬಿಸಿಲು ಕೂಡ ಬೀಳುತ್ತಿದೆ.

ಜುಲೈ 25 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ  ಪ್ರದೇಶಗಳಾದ ಮಾಣಿಯಲ್ಲಿ 55 ಮಿಲಿ ಮೀಟರ್ (ಮಿ.ಮೀ.), ಯಡೂರು 50 ಮಿ.ಮೀ., ಹುಲಿಕಲ್ 66 ಮಿ.ಮೀ., ಮಾಸ್ತಿಕಟ್ಟೆ 67 ಮಿ.ಮೀ. ಚಕ್ರಾ 60 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 55 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗದಲ್ಲಿ 4.60 ಮಿ.ಮೀ., ಭದ್ರಾವತಿ 5.10 ಮಿ.ಮೀ., ತೀರ್ಥಹಳ್ಳಿ 30.10 ಮಿ.ಮೀ., ಸಾಗರ 23.60 ಮಿ.ಮೀ., ಶಿಕಾರಿಪುರ 7.80 ಮಿ.ಮೀ., ಸೊರಬ 15.80 ಮಿ.ಮೀ., ಹೊಸನಗರದಲ್ಲಿ 25.20 ಮಿ.ಮೀ. ಮಳೆಯಾಗಿದೆ.

ಮುಂದುವರಿದ ನಿರೀಕ್ಷೆ : ಜೂನ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಾಗಿತ್ತು. ಆದರೆ ಜುಲೈ ತಿಂಗಳ ಆರಂಭದ ಕೆಲ ದಿನಗಳ ಕಾಲ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ನಂತರ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಕೆಲ ದಿನಗಳಿಂದ ಮತ್ತೆ ಮಳೆಯಾಗುತ್ತಿದೆ. ಆದರೆ ಧಾರಾಕಾರ, ನಿರಂತರ ಮಳೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಮಳೆಯಾಗಲಿದೆಯಾ? ಎಂಬ ನಿರೀಕ್ಷೆಯಲ್ಲಿ ನಾಗರಿಕದ್ದಾರೆ.

ಕೃಷಿ ಚಟುವಟಿಕೆ ಅಸ್ತವ್ಯಸ್ತ..!

*** ಮಳೆ ಕೊರತೆಯಿಂದ ಕೆರೆಕಟ್ಟೆ, ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಇದರಿಂದ ಕೃಷಿ ಚಟುವಟಿಕೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಹಲವೆಡೆ ಮೆಕ್ಕೆಜೋಳ, ರಾಗಿ ಮತ್ತೀತರ ಕಡಿಮೆ ನೀರು ಲಭ್ಯತೆಯ ಬೆಳೆಗಳತ್ತ ರೈತರು ಚಿತ್ತ ಹರಿಸಿದ್ಧಾರೆ. ಉಳಿದಂತೆ ಭತ್ತ ನಾಟಿ ಕಾರ್ಯ ಕುಂಠಿತವಾಗಿದೆ. ಹಲವೆಡೆ ರೈತರು ನಾಟಿ ಕಾರ್ಯಕ್ಕೆ ಗದ್ದೆಯನ್ನು ಹಸನು ಮಾಡಿಕೊಂಡಿದ್ದಾರೆ. ಉತ್ತಮ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

Continued monsoon rains in Malnad: Huge drop in water storage in Linganamakki, Bhadra dams! | Shimoga, July 25: Severe shortage of monsoon rains continues in Malnad. Rainfall is not falling as expected. This is affecting the water storage of important reservoirs such as Linganamakki and Bhadra reservoirs.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *