ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜುಲೈ 28: ಶಿವಮೊಗ್ಗ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಡುಬಡ ಕುಟುಂಬದ ಗರ್ಭೀಣಿಗೆ ಚಿಕಿತ್ಸೆಯ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರದ ವ್ಯವಸ್ಥೆ ಹಾಗೂ ಶಿಕ್ಷಣದಿಂದ ವಂಚಿತರಾಗಿದ್ದ ಅವರ ಇಬ್ಬರು ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವ ಸಮಾಜಮುಖಿ ಕಾರ್ಯವೊಂದನ್ನು, ನಾಗರಿಕರ ಸಹಭಾಗಿತ್ವದಲ್ಲಿ ವಿವಿಧ ಇಲಾಖೆಗಳು ಯಶಸ್ವಿಯಾಗಿ ಮಾಡಿದ ಘಟನೆ ಜುಲೈ 28 ರಂದು ನಡೆಯಿತು.
ಈ ಮಾನವೀಯ ಕಾರ್ಯದಲ್ಲಿ ಮಹಿಳಾ ಪೊಲೀಸ್ ಠಾಣೆ, ಅಕ್ಕ ಪಡೆ, ವಿನೋಬನಗರ ಪೊಲೀಸ್ ಠಾಣೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಗಿಯಾಗಿದ್ದವು. ಇದರಿಂದ ಕೆಲ ಗಂಟೆಗಳಲ್ಲಿಯೇ ಬಡ ಕುಟುಂಬಕ್ಕೆ ಅಗತ್ಯ ನೆರವಿನಹಸ್ತ ದೊರಕುವಂತಾಯಿತು. ಇದಕ್ಕೆ ‘ಉದಯ ಸಾಕ್ಷಿ’ ಡಿಜಿಟಲ್ ನ್ಯೂಸ್ ವೇದಿಕೆಯಾಗಿತ್ತು.
ಏನಾಯ್ತು? : ಮಧ್ಯ ಪ್ರದೇಶ ರಾಜ್ಯದ ಕಡುಬಡ ಕುಟುಂಬದ ದಂಪತಿ ಕಳೆದ ಐದು ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಶೆಡ್ ವೊಂದರಲ್ಲಿ ನೆಲೆಸಿದ್ದಾರೆ. ಇವರಿಗೆ 7 ಹಾಗೂ 3 ವರ್ಷದ ಇಬ್ಬರು ಪುತ್ರರಿದ್ದಾರೆ.
‘ಸದ್ಯ ಮಹಿಳೆಯು ಗರ್ಭೀಣಿಯಾಗಿದ್ದು ಅವರಿಗೆ ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ದೊರಕುತ್ತಿರಲಿಲ್ಲ. ನಿಯಮಿತವಾಗಿ ಆರೋಗ್ಯ ತಪಾಸಣೆಯು ನಡೆಯುತ್ತಿರಲಿಲ್ಲ. ಈ ಹಿಂದೆ ಅಪೌಷ್ಠಿಕತೆಯ ಕಾರಣದಿಂದಲೇ ಸದರಿ ಮಹಿಳೆಗೆ ಹೆರಿಗೆಯಾದ ದಿನದಂದೇ ಮಗು ಮೃತಪಟ್ಟಿತ್ತು.
ಹಾಗೆಯೇ ಇವರ ಇಬ್ಬರು ಮಕ್ಕಳಿಗೆ, ನಾನಾ ಕಾರಣಗಳಿಂದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಸೇರ್ಪಡೆ ನಿರಾಕರಿಸಲಾಗಿತ್ತು. ಸದರಿ ಬಡ ಕುಟುಂಬಕ್ಕೆ ನೆರವಾಗುವಂತೆ’ ಕೆಲ ನಾಗರಿಕರು ‘ಉದಯ ಸಾಕ್ಷಿ’ ಡಿಜಿಟಲ್ ನ್ಯೂಸ್ ಸಂಪಾದಕರಾದ ಬಿ ರೇಣುಕೇಶ್ ಅವರ ಗಮನಕ್ಕೆ ತಂದಿದ್ದರು.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಸುರೇಶ್ ಎನ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಎನ್ ಅವರು ಸದರಿ ಕಾರ್ಮಿಕ ಕುಟುಂಬ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿ ಕುಟುಂಬದ ಅಹವಾಲು ಆಲಿಸಿದರು.
ಇನ್ಸ್’ಪೆಕ್ಟರ್ ಸುರೇಶ್ ಎನ್ ರವರ ಮಾಹಿತಿ ಮೇರೆಗೆ ಸ್ಥಳಕ್ಕೆ ಮಹಿಳೆಯರ ರಕ್ಷಣೆಯ ‘ಅಕ್ಕ ಪಡೆ’, ಸಾರ್ವಜನಿಕ ಶಿಕ್ಷಣ ಇಲಾಖೆ ಬಿಇಓ ರಮೇಶ್ ನಾಯ್ಕ್, ಬೊಮ್ಮನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆಶಾ, ವಿನೋಬನಗರ ಠಾಣೆ ಸಿಬ್ಬಂದಿಗಳು ದೌಡಾಯಿಸಿದ್ದರು.
ಶಾಲೆ ಸೇರ್ಪಡೆ : ಬಿಇಓ ರಮೇಶ್ ನಾಯ್ಕ್ ಅವರು ತಮ್ಮ ವಾಹನದಲ್ಲಿಯೇ 7 ವರ್ಷದ ಬಾಲಕನನ್ನು ಗೆಜ್ಜೇನಹಳ್ಳಿ ಸರ್ಕಾರಿ ಶಾಲೆಗೆ ಕರೆದೊಯ್ದು, ಅದಿಕೃತವಾಗಿ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿದರು. ಬಾಲಕನಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡಿಸಿದರು. ಹಾಗೆಯೇ 3 ವರ್ಷದ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ತದನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಗರ್ಭೀಣಿಯನ್ನು ಆರೋಗ್ಯ ತಪಾಸಣೆಗೆ ಕರೆದೊಯ್ದರು. ಅವರಿಗೆ ಅಗತ್ಯವಿರುವ ಔಷಧೋಪಚಾರ, ನಿಯಮಿತ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ.
ಮತ್ತೊಂದೆಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ಗಂಗಾ ಬಾಯಿ ಅವರು ಗರ್ಭೀಣಿಗೆ ಅಂಗನವಾಡಿಯಿಂದ ಲಭ್ಯವಾಗುವ ಪೌಷ್ಠಿಕಾಂಶಯುಕ್ತ ಆಹಾರವನ್ನು ದೊರಕಿಸಿ ಕೊಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಇಷ್ಟು ದಿನ ಸರ್ಕಾರಿ ಸೌಲಭ್ಯ ಪಡೆಯಲು ಪರಿತಪಿಸುತ್ತಿದ್ದ ಹೊರರಾಜ್ಯದ ಕಡುಬಡ ಕೂಲಿಕಾರ್ಮಿಕ ಕುಟುಂಬವೊಂದಕ್ಕೆ ಕೆಲವೇ ಕೆಲ ಗಂಟೆಗಳಲ್ಲಿಸಮರೋಪಾದಿಯಲ್ಲಿ ಆಡಳಿತ ವ್ಯವಸ್ಥೆ ಸ್ಪಂದಿಸಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ನೆರವಾಗಿದ್ದು ನಿಜಕ್ಕೂ ಅಭಿನಂದನೀಯ ಸಂಗತಿಯಾಗಿದೆ.
ಸದರಿ ಮಾನವೀಯ ಕಾರ್ಯದಲ್ಲಿ ಭಾಗಿಯಾದ ಮಹಿಳಾ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಸುರೇಶ್ ಎನ್, ಬಿಇಓ ರಮೇಶ್ ನಾಯ್ಕ್, ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರವಿಕುಮಾರ್, ಗೌರಿ ಎಸ್, ಅಕ್ಕ ಪಡೆಯ ಸಿಬ್ಬಂದಿಗಳಾದ ಅಮೃತಾ ಬಾಯಿ, ಮಮತಾ, ದೇವಕಿ ಬಾಯಿ, ವಿನೋಬನಗರ ಠಾಣೆ ಸಿಬ್ಬಂದಿಗಳಾದ ಆಕಾಶ್, ಮಲ್ಲಪ್ಪ, ಅರುಣ್ ಕುಮಾರ್, ಬೊಮ್ಮನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆಶಾ, ಪತ್ರಕರ್ತರಾದ ಬಿ ರೇಣುಕೇಶ್, ಸಮಾಜ ಸೇವಕರೂ ನಿವೃತ್ತ ಶಿಕ್ಷಕರಾದ ಮಹೇಶ್ ಎಲಿಗಾರ್, ಸ್ಥಳೀಯರಾದ ರವಿ, ಮುರುಗೇಶ್, ಅಭಿನಂದನ್, ಷಡಾಕ್ಷರಿ, ಕುಂಚೇನಹಳ್ಳಿಯ ಷಣ್ಮುಖನಾಯ್ಕ್ ಅವರಿಗೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

