ಶಿವಮೊಗ್ಗ (shivamogga), ಆಗಸ್ಟ್ 24: ತನ್ನ ಮೂವರು ಮಕ್ಕಳೊಂದಿಗೆ ಮಹಿಳೆಯೋರ್ವರು ತುಂಗಾ ನದಿಗೆ ಹಾರಿದ್ದು, ಈ ವೇಳೆ ಸಾರ್ವಜನಿಕರು ಮಹಿಳೆ ಹಾಗೂ 11ತಿಂಗಳ ಗಂಡು ಮಗುವನ್ನು ರಕ್ಷಿಸಿದ ಘಟನೆ ಆಗಸ್ಟ್ 24 ರ ಸಂಜೆ ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಸಮೀಪ ನಡೆದಿದೆ.
6 ವರ್ಷ ಹಾಗೂ 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿಯಲ್ಲಿ ಕಣ್ಮರೆಯಾಗಿದ್ದಾರೆ. ಕತ್ತಲೆಯಲ್ಲಿಯೇ ಅಗ್ನಿಶಾಮಕ ದಳ ತಂಡವು ಮಕ್ಕಳಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿತು. ಆದರೆ ಇಬ್ಬರು ಮಕ್ಕಳ ಸುಳಿವು ಪತ್ತೆಯಾಗಿಲ್ಲ.
ಕತ್ತಲೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ತಂಡ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ.
ಏನೀದು ಘಟನೆ? : ಮಹಿಳೆಯು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ಇವರ ಪತಿ ಜೆಸಿಬಿ ಆಪರೇಟರ್ ಆಗಿದ್ದು, ಕೆಲಸದ ನಿಮಿತ್ತ ಸವಳಂಗದಲ್ಲಿ ನೆಲೆಸಿದ್ದಾರೆ. ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ, ಮಹಿಳೆಯು ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಸಂಜೆ ವೇಳೆ ಚಿಕ್ಕಲ್ ರಸ್ತೆಯ ಹರಕೇಶ್ವರ ದೇವಾಲಯದ ಸಮೀಪದ ರೈಲ್ವೆ ಹಳಿ ಮೇಲಿಂದ ಮೂವರು ಮಕ್ಕಳೊಂದಿಗೆ, ಮಹಿಳೆಯು ತುಂಗಾ ನದಿಗೆ ಧುಮುಕಿದ್ದಾಳೆ. ಈ ವೇಳೆ ಅಲ್ಲಿಯೇ ಇದ್ದ ಯುವಕನೋರ್ವ ಮಹಿಳೆ ಹಾಗೂ 11 ತಿಂಗಳ ಮಗುವನ್ನು ರಕ್ಷಣೆ ಮಾಡುವಲ್ಲಿ ಸಫಲನಾಗಿದ್ದಾನೆ.
ಉಳಿದ ಇಬ್ಬರು ಮಕ್ಕಳು ನದಿ ನೀರಿನಲ್ಲಿ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಕ್ಕಳಿಗಾಗಿ ಶೋಧ ನಡೆಸಿದ್ದಾರೆ. ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Shivamogga, August 24: A woman jumped into the Tunga River with her three children, and the public rescued the woman and her 11-month-old baby boy. The incident took place on the evening of August 24 near the Hole bus stand in Shivamogga city.

