ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಅಕ್ಟೋಬರ್ 05: ಶಿವಮೊಗ್ಗ ನಗರದ ಆಲ್ಕೋಳ ಬಡಾವಣೆಯಲ್ಲಿರುವ ಕೇಂದ್ರ ಸರ್ಕಾರ ಅಧೀನದ ಭಾರತೀಯ ಆಹಾರ ನಿಗಮ (ಎಫ್’ಸಿಐ) ಗೋದಾಮಿನಿಂದ ಆಗಮಿಸುವ ಹುಳು-ಹುಪ್ಪಟ್ಟೆಗಳ ಹಾವಳಿಗೆ, ಸಮೀಪದ ನಂದಿನಿ ಬಡಾವಣೆ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ!
‘ಸಂಜೆಯಾಗುತ್ತಿದ್ದಂತೆ ನುಸಿ ಸೇರಿದಂತೆ ಮತ್ತೀತರ ಹುಳು-ಹುಪ್ಪಟೆಗಳು ಮನೆಯೊಳಗೆ ಆಗಮಿಸುತ್ತವೆ. ಮನೆಯೊಳಗೆ ಮುಕ್ತವಾಗಿ ಊಟ, ತಿಂಡಿ ಮಾಡಲು ಆಗುತ್ತಿಲ್ಲ. ಎಲ್ಲೆಂದರಲ್ಲಿ ಬೀಳುತ್ತಿವೆ. ನೆಮ್ಮದಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಚಿಕ್ಕ ಮಕ್ಕಳ ಕಿವಿ, ಮೂಗಿನೊಳಗೂ ಹೋಗುತ್ತಿವೆ. ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ.
ಹುಳು-ಹುಪ್ಪಟೆಗಳ ಹಾವಳಿಯಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತಿವೆ. ಏನೂ ಮಾಡಬೇಕು ಎಂಬುವುದೇ ಗೊತ್ತಾಗುತ್ತಿಲ್ಲ. ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈ ಬಗ್ಗೆ ಎಫ್’ಸಿಐ ಗೋದಾಮಿನವರ ಗಮನಕ್ಕೆ ತಂದರೆ ನಾವೇನು ಮಾಡಬೇಕು? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ನಮ್ಮ ಗೋಳು ಕೇಳುವವರೇ ಯಾರೂ ಇಲ್ಲವಾಗಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ನಿರ್ವಹಣೆ ಕೊರತೆಯೇ? : ಎಫ್’ಸಿಐ ಗೋದಾಮಿನಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಮತ್ತೀತರ ದವಸ-ಧಾನ್ಯ ದಾಸ್ತಾನು ಮಾಡಲಾಗುತ್ತದೆ. ಹುಳು-ಹುಪ್ಪಟೆಗಳ ನಿಯಂತ್ರಣಕ್ಕೆ ನಿಯಮಿತವಾಗಿ ಕ್ರಮಕೈಗೊಳ್ಳಬೇಕು. ಔಷಧ ಸಿಂಪಡಿಸಬೇಕು. ಆದರೆ ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಗೋದಾಮು ಸಮೀಪದ ನಮ್ಮ ಮನೆಗಳಲ್ಲಿ ಹುಳು – ಹುಪ್ಪಟೆಗಳ ಹಾವಳಿ ವಿಪರೀತವಾಗುವಂತಾಗಿದೆ ಎಂದು ಕೆಲ ನಿವಾಸಿಗಳು ದೂರುತ್ತಾರೆ.
ನುಸಿ ಸೇರಿದಂತೆ ನಾನಾ ರೀತಿಯ ಹುಳು-ಹುಪ್ಪಟೆಗಳು ಹಾರಿಕೊಂಡು ಮನೆಯೊಳಗೆ ಬರುತ್ತವೆ. ಇವುಗಳು ಜನವಸತಿ ಪ್ರದೇಶಕ್ಕೆ ಆಗಮಿಸದಂತೆ ಗೋದಾಮು ಸುತ್ತಮುತ್ತ ಸೊಳ್ಳೆ ಪರದೆ ಮಾದರಿಯ ಬಲೆಗಳನ್ನು ಅಳವಡಿಸಬೇಕಾಗಿದೆ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.
ಗಮನಿಸಲಿ: ಇತ್ತೀಚೆಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡವು ಹೋಟೆಲ್, ತಿಂಡಿ-ತಿನಿಸು ಆಹಾರ ಕೇಂದ್ರಗಳಿಗೆ ದಿಡೀರ್ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದೆ. ಇದೇ ರೀತಿಯಲ್ಲಿ ಎಫ್’ಸಿಐ ಗೋದಾಮಿಗೂ ಭೇಟಿಯಿತ್ತು ಅಲ್ಲಿ ದಾಸ್ತಾನು ಮಾಡಿರುವ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಬೇಕು. ಪಾಲಿಕೆ ಆಡಳಿತ ಕೂಡ ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.
ಹಾಗೆಯೇ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಕೂಡ ಇತ್ತ ಗಮನಹರಿಸಬೇಕು. ಎಫ್’ಸಿಐ ಗೋದಾಮಿನಿಂದ ಸುತ್ತಮುತ್ತಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ನೆಮ್ಮದಿಯಾಗಿ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಒಟ್ಟಾರೆ ಆಲ್ಕೋಳದ ಎಫ್’ಸಿಐ ಗೋದಾಮಿನಿಂದ ಬರುವ ಹುಳು-ಹುಪ್ಪಟೆಗಳು ಸುತ್ತಮುತ್ತಲಿನ ನಿವಾಸಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ತಕ್ಷಣವೇ ಜಿಲ್ಲಾಡಳಿತ ನಾಗರಿಕರಿಗೆ ನೆರವಿಗೆ ಧಾವಿಸುವ ಕಾರ್ಯ ಮಾಡಬೇಕಾಗಿದೆ.
Shivamogga: Residents plagued by an infestation of insects from the FCI warehouse – Will the Deputy Commissioner take note? | Shivamogga, October 5: Residents of the nearby Nandini Layout are in distress due to an infestation of insects and pests originating from the Food Corporation of India (FCI) warehouse—a Central Government facility—located in the Alkola area of Shivamogga city. They are facing immense hardship!

