ಶಿಕಾರಿಪುರ (shikaripura), ಅಕ್ಟೋಬರ್ 07: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು, ಅಕ್ರಮವಾಗಿ ಲಾರಿಯಲ್ಲಿ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಶಿವಕುಮಾರ್ ಆಗ್ರಹಿಸಿದ್ದಾರೆ.
ಒಟ್ಟಾರೆ ಲಾರಿಯಲ್ಲಿ ಸುಮಾರು 105 ಕ್ವಿಂಟಾಲ್ ತೂಕದ 212 ಅಕ್ಕಿ ಚೀಲಗಳಿದ್ದು, ಇದರ ಅಂದಾಜು ಮೌಲ್ಯ 2,47,200 ರೂ.ಗಳೆಂದು ಅಂದಾಜಿಸಲಾಗಿದೆ. ಈ ಕುರಿತಂತೆ ಆಹಾರ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ, ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿಯ ರೈಸ್ ಮಿಲ್ ವೊಂದರಿಂದ ಸದರಿ ಅಕ್ಕಿಯನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಆನಂದಪುರ ಮಾರ್ಗವಾಗಿ ಗುತ್ತಲಕ್ಕೆ ತೆರಳುತ್ತಿದ್ದ ವೇಳೆ, ಅಕ್ಟೋಬರ್ 6 ರ ಮುಂಜಾನೆ ಶಿಕಾರಿಪುರ ಪಟ್ಟಣದಲ್ಲಿ ಸದರಿ ಲಾರಿಯನ್ನು ತಡೆದು, ಆಹಾರ ಇಲಾಖೆ ಹಾಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.
ಅನ್ನಭಾಗ್ಯ ಯೋಜನೆಯಡಿ ನಾಗರಿಕರಿಗೆ ವಿತರಣೆ ಮಾಡಬೇಕಾದ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಕಳ್ಳಸಾಗಾಣೆ ಮಾಡಲಾಗುತ್ತಿದೆ. ಇದೀಗ ನಕಲಿ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಪಟ್ಟಣ ಠಾಣೆ ಪೊಲೀಸರಿಗೆ ಸಂಘಟನೆಯಿಂದ ಮನವಿ ಪತ್ರ ಅರ್ಪಿಸಲಾಗಿದೆ ಅಧ್ಯಕ್ಷ ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಗ್ರಾಮಾಂತರ ಅಧ್ಯಕ್ಷರಾದ ಶಾಂತಕುಮಾರ್ ನಾಯ್ಕ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖಾಸಿಂ, ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು ಎಂದು ಮಾಹಿತಿ ನೀಡಿದ್ದಾರೆ.

