ಶಿವಮೊಗ್ಗ (shivanogga), ಅಕ್ಟೋಬರ್ 07: ಮಣ್ಣಿನ ಘಮಲಿನಿಂದ ಬಂದ ಕನಸುಗಳು, ಪೋಷಕರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ವಿದ್ಯಾಸಂಸ್ಥೆ ನೀಡಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ಅರಳುತ್ತದೆ ಎಂಬುದಕ್ಕೆ ಜೆಎನ್‌ಎನ್‌ಸಿಇಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಯಶೋಗಾಥೆ ಸಾಕ್ಷಿಯಾಯಿತು.
ಕಣ್ಣಲ್ಲಿ ಸಾಧನೆಯ ಹೊಳಪು, ಮಾತಿನಲ್ಲಿ ಪೋಷಕರ ಮೇಲಿನ ಕೃತಜ್ಞತೆ, ನೆನಪಿನಲ್ಲಿ ಕಾಲೇಜಿನ ದಿನಗಳು… ತಮ್ಮ ಯಶಸ್ಸಿನ ಕಥೆಯನ್ನು ವಿದ್ಯಾರ್ಥಿಗಳು ಹಂಚಿಕೊಳ್ಳುತ್ತಿದ್ದಂತೆ, ಅವರ ಹಿಂದೆ ನಿಂತಿದ್ದ ಪೋಷಕರ ಪರಿಶ್ರಮವೂ ವೇದಿಕೆಯಲ್ಲಿ ಜೀವಂತವಾಗಿತ್ತು. ದೂರದ ಹಳ್ಳಿಗಳಿಂದ ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಬಂದವರು, ಹಾಸ್ಟೆಲ್‌ನಲ್ಲಿ ಉಳಿದು ಓದಿದವರು, ಕೃಷಿಕ ಕುಟುಂಬದಿಂದ ಬಂದವರು, ಸಣ್ಣ ಉದ್ಯಮಿಗಳ ಮಕ್ಕಳು… ಹೀಗೆ ಬದುಕಿನ ಹಲವು ಹಿನ್ನಲೆಗಳಿಂದ ಬಂದ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ತಮ್ಮ ಸಾಧನೆಯ ಪುಟಗಳನ್ನು ತೆರೆದಿಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಕಚೇರಿಯಲ್ಲಿ ಬುಧವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರ‍್ಯಾಂಕ್ ವಿಜೇತ ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಮಾಧ್ಯಮಗೋಷ್ಠಿ ಈ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ 7 ಚಿನ್ನದ ಪದಕಗಳನ್ನು ಪಡೆದ ಧನ್ಯಶ್ರೀ ಬಿ.ಎಂ. ಮಾತನಾಡಿ, ಆಯನೂರು ಸಮೀಪದ ಸಿರಿಗೆರೆ ಗ್ರಾಮದವರಾದ ತಾವು ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಪ್ರಯಾಣಿಸಿ ಶಿಕ್ಷಣ ಪಡೆದಿರುವುದಾಗಿ ತಿಳಿಸಿದರು. ಪೋಷಕರು ಕೃಷಿಕರಾಗಿದ್ದು, ಅವರ ಪರಿಶ್ರಮ ಮತ್ತು ಪ್ರೋತ್ಸಾಹವೇ ತಮ್ಮ ಸಾಧನೆಗೆ ಪ್ರಮುಖ ಕಾರಣ ಎಂದರು. 9.44 ಸಿಜಿಪಿಎ ಗಳಿಸಿರುವ ತಾವು ಎಂಟು ಪದಕಗಳ ನಿರೀಕ್ಷೆಯಲ್ಲಿದ್ದೆ. ಪ್ರಸ್ತುತ ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾಗಿ ಹೇಳಿದರು.
ಎಲೆಕ್ಟ್ರಿಕಲ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದ ನಯ್ಯರ್ ಫಾತಿಮಾ ಅಫ್ರೀನ್ ತಾವು ಮೂಲತಃ ತರೀಕೆರೆ ತಾಲೂಕಿನವರಾಗಿದ್ದು, ತಂದೆ ಸರ್ಕಾರಿ ವಕೀಲರು ಹಾಗೂ ತಾಯಿ ಸರ್ಕಾರಿ ಶಿಕ್ಷಕಿಯಾಗಿದ್ದಾರೆ ಎಂದು ತಿಳಿಸಿದರು.
4ನೇ ರ‍್ಯಾಂಕ್ ಪಡೆದ ಯಶಸ್ಕರ ಟಿ.ಜಿ. ಮಾತನಾಡಿ, ತಾವು ಶೃಂಗೇರಿಯವರಾಗಿದ್ದು, ತಂದೆ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
5ನೇ ರ‍್ಯಾಂಕ್ ಪಡೆದ ಭೂಮಿಕಾ ಎಂ. ತಾವು ಸಾಗರದವರಾಗಿದ್ದು, ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಶಿಕ್ಷಣ ಪಡೆದಿರುವುದಾಗಿ ಹೇಳಿದರು. ಪೋಷಕರು ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾಲೇಜು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
6ನೇ ರ‍್ಯಾಂಕ್ ಪಡೆದ ಜಾರ್ಜ್ ಟಿ. ಪೌಲ್ ಮಾತನಾಡಿ, ತಾವು ಎನ್.ಆರ್.ಪುರದ ಕೃಷಿಕ ಕುಟುಂಬದವರಾಗಿದ್ದು, ಪೋಷಕರ ಬೆಂಬಲ ತಮ್ಮ ಸಾಧನೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
8 ನೇ ರ‍್ಯಾಂಕ್ ಪಡೆದ ನಿತ್ಯಶ್ರೀ ಹೆಗಡೆ ಕೆ.ಎನ್. ತಾವು ತೀರ್ಥಹಳ್ಳಿಯ ರೈತಾಪಿ ಕುಟುಂಬದಿಂದ ಬಂದವರಾಗಿದ್ದು, ಸವಾಲಿನ ಬದುಕಿನ ನಡುವೆಯೂ ಜೆಎನ್‌ಎನ್‌ಸಿಇ ಉತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದರು. ಪ್ರಸ್ತುತ ಟಿಸಿಎಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದಾಗಿ ಸಂತಸ ಹಂಚಿಕೊಂಡರು.
10ನೇ ರ‍್ಯಾಂಕ್ ಪಡೆದ ಸ್ವಾತಿ ಎಸ್.ಜಿ. ತಾವು ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಕೃಷಿ ಹಿನ್ನೆಲೆಯ ಕುಟುಂಬದವರಾಗಿದ್ದು, ಜೆಎನ್‌ಎನ್‌ಸಿಇ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ವಿದ್ಯಾಭ್ಯಾಸ ನಡೆಸಿರುವುದಾಗಿ ತಿಳಿಸಿದರು.
ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಮಾತನಾಡಿ, ಮಲೆನಾಡಿನ ವಿದ್ಯಾರ್ಥಿಗಳು ಪಿಯುಸಿ ನಂತರ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲದಂತೆ, ತಮ್ಮದೇ ಪ್ರದೇಶದಲ್ಲಿ ಉತ್ಕೃಷ್ಟ ಶಿಕ್ಷಣ ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಜೆಎನ್‌ಎನ್‌ಸಿಇಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಅವರ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನಿಟ್ಟಿನಲ್ಲಿ ಸ್ಟಾರ್ಟ್‌ಅಪ್‌ಗಳನ್ನು ರೂಪಿಸಲು ಅಗತ್ಯವಾದ ಪ್ರೇರಕ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದರು.
ಕಾಲೇಜಿನ 40 ವಿದ್ಯಾರ್ಥಿಗಳು ವಿಟಿಯು ಬಿ.ಇ. ಆನರ್ಸ್ ಪದವಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸ್ವಯಂ–ಎನ್‌ಪಿಟಿಇಎಲ್ ಪ್ರಮಾಣಪತ್ರ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು 1,315 ವಿದ್ಯಾರ್ಥಿಗಳು ಎನ್‌ಪಿಟಿಇಎಲ್ ಪ್ರಮಾಣಪತ್ರಗಳನ್ನು ಪಡೆದು ಯಶಸ್ವಿಯಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಪಿ. ಮೈಲಾರಪ್ಪ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಎಂ.ಎಸ್. ಅನಂತದತ್ತ, ಜಿ.ಎನ್. ಸುಧೀರ್, ಕುಲಸಚಿವರಾದ ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸಂಜೀವ್ ಕುಂಟೆ, ಡಾ. ಚೇತನ್ ಕೆ.ಆರ್., ಡಾ. ಸುರೇಂದ್ರ, ಡಾ. ಎಚ್.ಬಿ. ಸುರೇಶ್, ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Shimoga’s JNNCE Witnesses the Remarkable Achievements of Rural Students! | Shimoga: The success stories of JNNCE’s rank-winning students stand as a testament to how the path to achievement blossoms when dreams rooted in the soil, the hard work of parents, the guidance of lecturers and the opportunities provided by the institution all come together.

