ಶಿಕ್ಷಣ ಸಚಿವರ ತವರೂರಲ್ಲಿ ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಆರಂಭವಾಗದ ಬಿಸಿಯೂಟ!

ಶಿಕ್ಷಣ ಸಚಿವರ ತವರೂರಲ್ಲಿ ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಆರಂಭವಾಗದ ಬಿಸಿಯೂಟ! ವರದಿ : ಬಿ. ರೇಣುಕೇಶ್

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಸೆ. 13: ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಶಿವಮೊಗ್ಗ ನಗರದ ಸರ್ಕಾರಿ ಶಾಲೆಯೊಂದರ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವಿರಲಿ, ಶಾಲೆ ಆರಂಭವಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯೇ ಆರಂಭವಾಗಿಲ್ಲ..!

ಹೌದು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಸರ್ಕಾರಿ ಶಾಲೆಯಲ್ಲಿ ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಿಲ್ಲ. ಇದರಿಂದ ಬಡ – ಮಧ್ಯಮ ವರ್ಗದ ಮಕ್ಕಳು ತಮ್ಮ ನ್ಯಾಯಬದ್ಧ ಹಕ್ಕಿನಿಂದ ವಂಚಿತವಾಗುವಂತಾಗಿದೆ.

ಕೋಟಿ ರೂ. ವೆಚ್ಚದ ಕಟ್ಟಡ: ಸದರಿ ಶಾಲೆಯ ಮೇಲುಸ್ತುವಾರಿಯನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತಿದೆ. ಸರಿಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಲಾಗಿದೆ. ಕಳೆದ 4 ತಿಂಗಳ ಹಿಂದೆ ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿದೆ.

6 ರಿಂದ 10 ನೇ ತರಗತಿಯಿದ್ದು, ಸರಿಸುಮಾರು 100 ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಡ, ಮಧ್ಯಮ, ಕೂಲಿಕಾರ್ಮಿಕ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಸೌಲಭ್ಯವಿದೆ: ಶಾಲೆಯಲ್ಲಿ ಬಿಸಿಯೂಟ ಆರಂಭಕ್ಕೆ ಅಗತ್ಯವಾದ ಕೊಠಡಿ ವ್ಯವಸ್ಥೆ ಸೇರಿದಂತೆ ಸೌಲಭ್ಯವಿದೆ. ಈಗಾಗಲೇ ಅಕ್ಷರ ದಾಸೋಹ ಅಧಿಕಾರಿಗಳು ಶಾಲೆಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೂ ಬಿಸಿಯೂಟ ವ್ಯವಸ್ಥೆ ಮಾತ್ರ ಆರಂಭವಾಗಿಲ್ಲ.

ಶಿಕ್ಷಣ ಸಚಿವರ ತವರೂರಲ್ಲಿಯೇ ಕಳೆದ ನಾಲ್ಕು ತಿಂಗಳುಗಳಿಂದ ಸರ್ಕಾರಿ ಶಾಲೆ ಮಕ್ಕಳು ಬಿಸಿಯೂಟ ವ್ಯವಸ್ಥೆಯಿಂದ ವಂಚಿತರಾಗಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.

ಇನ್ನಾದರೂ ಇತರೆ ಸರ್ಕಾರೆ ಶಾಲೆಗಳಲ್ಲಿನ ಮಕ್ಕಳಿಗೆ ಲಭ್ಯವಾಗುತ್ತಿರುವ ಬಿಸಿಯೂಟ, ಪೌಷ್ಠಿಕಾಂಶಯುಕ್ತ ಆಹಾರ ನೀಡಿಕೆ ವ್ಯವಸ್ಥೆಯನ್ನು ಸದರಿ ಶಾಲೆಯಲ್ಲಿಯೂ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಶಿಕ್ಷಕರ ಕೊರತೆ, ಆಟದ ಮೈದಾನವಿಲ್ಲ : ಮಾದರಿಯಾಗುವಂತಹ ಯಾವುದೇ ವ್ಯವಸ್ಥೆಯಿಲ್ಲ..!

*** ಸದರಿ ಮಾದರಿ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ;’ಮಾದರಿ’ಯಾಗುವಂತಹ ಯಾವುದೇ ವ್ಯವಸ್ಥೆಯಿಲ್ಲವಾಗಿದೆ! ಶಿಕ್ಷಕರ ಕೊರತೆಯಿದೆ. ಜೊತೆಗೆ ಆಟದ ಮೈದಾನದ ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಹಿಂದಿ ಭಾಷೆ, ದೈಹಿಕ ಶಿಕ್ಷಕರಿಲ್ಲ. ಕಂಪ್ಯೂಟರ್ ಶಿಕ್ಷಣ ಸೇರಿದಂತೆ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳ ಕಾರ್ಯಾರಂಭಕ್ಕೆ ಸರ್ಕಾರ ಆದ್ಯ ಗಮನಹರಿಸಬೇಕಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *