
ಮಳೆ – ಭೂ ಕುಸಿತ ಸಾಧ್ಯತೆ : ಆಗುಂಬೆ ಘಾಟ್ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ!
ಶಿವಮೊಗ್ಗ (shivamogga), ಜೂ. 27: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ (agumbe ghat) ರಸ್ತೆಯಲ್ಲಿ ಜೂನ್ 27 ರಿಂದ ಸೆಪ್ಟೆಂಬರ್ 15 ರವರೆಗೆ ಭಾರೀ ಸರಕು ಸಾಗಾಣೆ – ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ (dc) ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ 169 ಎ ತೀರ್ಥಹಳ್ಳಿ – ಮಲ್ಪೆ ರಸ್ತೆಯ (Theerthahalli – Malpe Road) ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದ ಹಾಗೂ ಭಾರೀ ವಾಹನಗಳ ಸಂಚಾರದಿಂದ, ಘಾಟಿ ರಸ್ತೆಯ ವಿವಿಧೆಡೆ ಭೂ ಕುಸಿತವಾಗು ಸಾಧ್ಯತೆಗಳಿವೆ. ಈ ಕಾರಣದಿಂದ 27-6-2024 ರಿಂದ 15-9-2024 ರವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ (national highway) ಇಲಾಖೆಯು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಅದೇ ರೀತಿಯಲ್ಲಿ ಪೊಲೀಸ್ ಇಲಾಖೆ (police dept) ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯು (rto) ಕೂಡ ಆಗುಂಬೆ ಘಾಟಿಯಲ್ಲಿ ತಾತ್ಕಾಲಿಕವಾಗಿ ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದವು.
ಈ ಕೋರಿಕೆಗಳ ಅನ್ವಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ ನಿಯಮಾವಳಿಯಂತೆ ಆಗುಂಬೆ ಘಾಟಿ ರಸ್ತೆಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗವಾದ ತೀರ್ಥಹಳ್ಳಿ – ಮಾಸ್ತಿಕಟ್ಟೆ – ಸಿದ್ದಾಪುರ – ಕುಂದಾಪುರ – ಉಡುಪಿ ಮಾರ್ಗವಾಗಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.