ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ – ಸ್ವಾರ್ಥಿ ಮನುಷ್ಯರ ಸೃಷ್ಟಿ: ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗ (chitradurga), ಜು. 20: ಜಾತಿ ವ್ಯವಸ್ಥೆ (caste system) ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರು ನುಡಿದರು.
ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೆ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ (Baba Saheb Ambedkar) ಅವರು ಶಿಕ್ಷಣದಿಂದಲೇ ಮೇದಾವಿಯಾದರು ಎಂದು ವಿವರಿಸಿದರು.
ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು.
