
ಬೆಂಗಳೂರು ಲಾಡ್ಜ್ ನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ನಿಗೂಢ ಸಾವು : ಸಾಕಷ್ಟು ಶೋಧ ನಡೆಸಿದ್ದ ಉಪ್ಪಾರಪೇಟೆ ಠಾಣೆ ಪೊಲೀಸರು!
ವರದಿ : ಬಿ. ರೇಣುಕೇಶ್
ಬೆಂಗಳೂರು / ಶಿವಮೊಗ್ಗ, ಅ. 17: ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಲಾಡ್ಜ್ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟ, ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್ ಜಿ. ಬಿ. ಜಕ್ಕನಗೌಡರ್ (53) ಅವರು, ಮಂಗಳವಾರ ರಾತ್ರಿಯಿಂದಲೇ ಕುಟುಂಬ ಸದಸ್ಯರಿಗೆ ಮೊಬೈಲ್ ಪೋನ್ ಸಂಪರ್ಕಕ್ಕೆ ಸಿಗದಿರುವ ಅಂಶ ತಿಳಿದುಬಂದಿದೆ.
ನ್ಯಾಯಾಲಯ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ತಹಶೀಲ್ದಾರ್ ಅವರು, ಉಪ್ಪಾರಪೇಟೆ ಪೊಲೀಸ್ ಠಾಣೆ (upparpet police station) ವ್ಯಾಪ್ತಿಯ, ವೈಭವ್ ಲಾಡ್ಜ್ ನಲ್ಲಿ ಕಳೆದ ಸೋಮವಾರದಿಂದ ತಂಗಿದ್ದರು ಎಂಬ ವಿವರ ಗೊತ್ತಾಗಿದೆ.
ಕುಟುಂಬದವರು ಅವರ ಮೊಬೈಲ್ ಪೋನ್ ಗೆ ನಿರಂತರವಾಗಿ ಕರೆ ಮಾಡಿದಾಗ, ರಿಂಗ್ ಆದರೂ ರಿಸೀವ್ ಮಾಡಿಲ್ಲವಾಗಿದೆ. ಈ ಕುರಿತಂತೆ ಕುಟುಂಬ ಸದಸ್ಯರು ಶಿವಮೊಗ್ಗ ಪೊಲೀಸರ (shimoga police) ಗಮನಕ್ಕೆ ತಂದಿದ್ದಾರೆ. ಅವರ ಮೊಬೈಲ್ ಫೋನ್ ಟವರ್ ಲೋಕೇಷನ್ ಪರಿಶೀಲಿಸಿದಾಗ, ಬೆಂಗಳೂರಿನ ಮೆಜೆಸ್ಟಿಕ್ (bangalore majestic) ಸುತ್ತಮುತ್ತ ಸಿಗ್ನಲ್ ತೋರಿಸಿದೆ ಎನ್ನಲಾಗಿದೆ.
ಈ ಬಗ್ಗೆ ಶಿವಮೊಗ್ಗ ಪೊಲೀಸರು, ಬೆಂಗಳೂರು ಪೊಲೀಸರ (bengaluru police) ಗಮನಕ್ಕೆ ತಂದಿದ್ದಾರೆ. ಇದರ ಆಧಾರದ ಮೇಲೆ ಉಪ್ಪಾರ ಪೇಟೆ ಠಾಣೆ ಪೊಲೀಸರು ಮೆಜೆಸ್ಟಿಕ್ ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಹಾಗೆಯೇ ತಹಶೀಲ್ದಾರ್ ಕುಟುಂಬ ಸದಸ್ಯರು ಕೂಡ ಮೆಜೆಸ್ಟಿಕ್ ಬಳಿಯ ಲಾಡ್ಜ್ ಗಳಲ್ಲಿ ಹುಡುಕಾಟ ನಡೆಸಿದ್ದಾರೆ.
ವೈಭವ್ ಲಾಡ್ಜ್ ನಲ್ಲಿರುವ ಸುಳಿವು ಪತ್ತೆ ಹಚ್ಚಿದ ಉಪ್ಪಾರಪೇಟೆ ಠಾಣೆ ಪೊಲೀಸ್ ಅಧಿಕಾರಿ ಮಾರುತಿ ಮತ್ತವರ ಸಿಬ್ಬಂದಿಗಳು, ಸದರಿ ಕೊಠಡಿ ಬಳಿ ತೆರಳಿದ್ದಾರೆ. ಈ ವೇಳೆ ಕೊಠಡಿಯ ಒಳಗಿನಿಂದ ಲಾಕ್ ಆಗಿದ್ದು, ಪೊಲೀಸರ ಸಮ್ಮುಖದಲ್ಲಿ ಲಾಡ್ಜ್ ನವರು ಬಾಗಿಲು ತೆರೆದಿದ್ದಾರೆ. ಈ ವೇಳೆ ಜಕ್ಕನಗೌಡರ್ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳುತ್ತವೆ.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ. ಮೇಲ್ನೋಟಕ್ಕೆ ಜಕ್ಕನಗೌಡರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೊಲೀಸರು ಗುರುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಕುಟುಂದವರು ಗದಗಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಗದಗ ಜಿಲ್ಲೆಯವರು : ಜಿ. ಬಿ. ಜಕ್ಕನಗೌಡರ್ ಮೂಲತಃ ಗದಗ ಜಿಲ್ಲೆಯವರಾಗಿದ್ದಾರೆ. 2023 ರ ಅಕ್ಟೋಬರ್‌ನಲ್ಲಿ ಅವರು ತೀರ್ಥಹಳ್ಳಿಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಣೆ ಆರಂಭಿಸಿದ್ದರು.
Thirthahalli taluk Tashildar who died mysteriously in a lodge room near Majestic in Bangalore G. B. Jakkanagouder (53)