
shimoga | ಸ್ತ್ರೀ ಪೀಡಕರಿಗೆ ಸಬ್ ಇನ್ಸ್’ಪೆಕ್ಟರ್ ಸ್ವಪ್ನ ನೀಡಿದ ಖಡಕ್ ಎಚ್ಚರಿಕೆಯೇನು?
ಶಿವಮೊಗ್ಗ (shivamogga), ಜ. 16: ‘ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ನಿಮಗೆ ಸಮಸ್ಯೆ, ಉಪಟಳ, ಕಿರಿಕಿರಿ ಉಂಟು ಮಾಡಿದರೆ ಕೂಡಲೇ 112 ಸಂಖ್ಯೆಯ ಸಹಾಯವಾಣಿ ಅಥವಾ ಚೆನ್ನಮ್ಮ ಪಡೆಗೆ ಕರೆ ಮಾಡಿ ಮಾಹಿತಿ ನೀಡಿ. ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳೆಯರ ರಕ್ಷಣೆಗೆಂದೆ ಜಿಲ್ಲಾ ಪೊಲೀಸ್ ಇಲಾಖೆ ಅಸ್ತಿತ್ವಕ್ಕೆ ತಂದಿರುವ ‘ಚನ್ನಮ್ಮ ಪಡೆ’ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮಾಂತರ ಠಾಣೆ ಸಬ್ ಇನ್ಸ್’ಪೆಕ್ಟರ್ (ಪಿಎಸ್ಐ) ಸ್ವಪ್ನ ಅವರು ಮಹಿಳೆಯರಿಗೆ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಕೆಎಸ್ಆರ್’ಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿರುವ ವ್ಯಾಪಾರಿ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ, ಜ. 15 ರಂದು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣ ನಿರ್ವಹಣೆ ವೇಳೆ, ಮಹಿಳೆಯರು ಸಾಕಷ್ಟು ಎಚ್ಚರಿಕೆವಹಿಸಬೇಕು. ಆನ್ ಲೈನ್ ನಲ್ಲಿ ಚಾಟಿಂಗ್ ಸೇರಿದಂತೆ ಜಾಲತಾಣಗಳ ಬಳಕೆ ವೇಳೆ ಜಾಗರೂಕರಾಗಿರಬೇಕು. ನಿಮ್ಮ ಖಾಸಗಿ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳಬೇಡಿ. ಇವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಯಾರೇ ಆಗಲಿ ತಮ್ಮನ್ನು ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ನಿಮ್ಮ ಮೊಬೈಲ್ ಫೋನ್ ಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ನಂಬರ್, ಎಟಿಎಂ ಪಿನ್ ನಂಬರ್ ಕೊಡಿ ಎಂದು ಕೇಳಿದಾಗ ಯಾವುದೇ ಕಾರಣಕ್ಕೂ ಕೊಡಬೇಡಿ.
ಒಂದು ವೇಳೆ ಮಾಹಿತಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಾರೆ. ಯಾವುದೇ ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾಸಗಿ, ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಾಗ ಹಾಗೂ ಸಂತೆ, ಜಾತ್ರೆ, ಮಾರುಕಟ್ಟೆ, ಬಸ್ ಹಾಗೂ ರೈಲ್ವೆ ನಿಲ್ದಾಣದಂತಹ ಜನ ಹೆಚ್ಚು ಸೇರಿರುವ ಕಡೆಗಳಲ್ಲಿ ನಿಮ್ಮ ಬೆಲೆ ಬಾಳುವ ಆಭರಣ ಬಗ್ಗೆ ಗಮನವಿರಲಿ. ಕಳ್ಳರು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಕಾನೂನಿನಲ್ಲಿ ಮಹಿಳೆ ಹಾಗೂ ಮಕ್ಕಳಿಗಿರುವ ವಿಶೇಷ ಹಕ್ಕುಗಳ ಬಗ್ಗೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಇದೇ ವೇಳೆ ಸ್ವಪ್ನ ಅವರು ಮಹಿಳೆಯರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಚನ್ನಮ್ಮ ಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
If someone is causing trouble in a public place, immediately call 112 helpline or Chennamma Pade and inform them. Strict action will be taken against those who cause trouble, Rural Police Sub-Inspector Swapna, who is in charge of Channamma Pade, told the women.
He spoke on January 15, participating in a women’s safety awareness program organized by the police department for the women staff working in the shop at the KSRTC bus station building in Shimoga city.