
shimoga | ಶಿವಮೊಗ್ಗ : ವರ್ತಕರಿಂದ ಪ್ರತಿಭಟನೆ – ಎಸ್ಪಿಗೆ ಮನವಿ ಸಲ್ಲಿಕೆ
ಶಿವಮೊಗ್ಗ (shivamogga), ಜ. 15: ಶಿವಮೊಗ್ಗದ ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರಿಯೋರ್ವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಗಾಂಧಿಬಜಾರ್ ಸುತ್ತಮುತ್ತಲಿನ ರಸ್ತೆಗಳ ವರ್ತಕರು ಜ. 15 ರಂದು ಪ್ರತಿಭಟನೆ ನಡೆಸಿದರು.
ಗಾಂಧಿ ಬಜಾರ್ ರಸ್ತೆಯ ರಾಮಣ್ಣಶ್ರೇಷ್ಠಿ ಪಾರ್ಕ್ ಸರ್ಕಲ್ ನಿಂದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯವರೆಗೆ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನೆಯಲ್ಲಿ ನೂರಾರು ವರ್ತಕರು ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ, ಮಧ್ಯಾಹ್ನದವರೆಗೆ ಗಾಂಧಿ ಬಜಾರ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳ ಕೆಲ ಅಂಗಡಿ – ಮುಂಗಟ್ಟುಗಳ ಬಾಗಿಲನ್ನು ವರ್ತಕರು ಬಂದ್ ಮಾಡಿದ್ದು ಕಂಡುಬಂದಿತು.
ಕ್ರಮಕ್ಕೆ ಆಗ್ರಹ : ವ್ಯಾಪಾರಿ ಹೀರಾಲಾಲ್ ಎಂಬುವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಇದು ಸ್ಥಳೀಯ ವರ್ತಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಾನಿರತ ವರ್ತಕರು ತಿಳಿಸಿದ್ದಾರೆ.
ಕೆಲವರು ಗಾಂಜಾ ಮೊದಲಾದ ಅಮಲು ಪದಾರ್ಥ ಸೇವಿಸಿ, ವರ್ತಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ವಿನಾ ಕಾರಣ ಜಗಳ ನಡೆಸುತ್ತಿದ್ದಾರೆ. ಗಾಂಧಿ ಬಜಾರ್ ನಲ್ಲಿ ಅಹಿತಕರ ಘಟನೆಗಳ ತಡೆಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಸದರಿ ರಸ್ತೆಯಲ್ಲಿ ಪೊಲೀಸ್ ಉಪ ಠಾಣೆ ಸ್ಥಾಪಿಸಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ವರ್ತಕರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಗಾಂಧಿ ಬಜಾರ್ ರಸ್ತೆಯ ವರ್ತಕರ ಸಂಘ, ಜವಳಿ, ಚಿನ್ನಬೆಳ್ಳಿ ವರ್ತಕರ ಸಂಘ ಸೇರಿದಂತೆ ಇತರೆ ಸಂಘಟನೆಗಳು ಭಾಗಿಯಾಗಿದ್ದವು.