Bengaluru | Permanent service for civic workers vehicle drivers: CM makes important announcement! bengaluru | ಪೌರ ಕಾರ್ಮಿಕರು ವಾಹನ ಚಾಲಕರ ಸೇವೆ ಕಾಯಂ : ಸಿಎಂ ಮಹತ್ವದ ಘೋಷಣೆ!

bengaluru | ಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರ ಸೇವೆ ಕಾಯಂ : ಸಿಎಂ ಮಹತ್ವದ ಘೋಷಣೆ!

ಬೆಂಗಳೂರು (bangalore), ಏ. 7:  ಮೇ 1 ರ ಕಾರ್ಮಿಕ ದಿನಾಚರಣೆಯಂದು ಗುತ್ತಿಗೆ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.

ಏ. 7 ರಂದು ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25 ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿದ್ದೀರಿ. ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಇತರರು ಬರುವುದು ಕಡಿಮೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು ಎಂದರು.

ವಾಹನ ಚಾಲಕರಿಗೂ ಕಾಯಂ : ಪೌರ ಕಾರ್ಮಿಕರ ಜೊತೆಗೆ ವಾಹನ ಚಾಲಕರ ಸೇವೆಯನ್ನೂ ಗುತ್ತಿಗೆಯಿಂದ ತೆಗೆದು ಕಾಯಂ‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು. ವಿದ್ಯಾವಂತರಾದರೆ ಮಾತ್ರ ಸ್ವಾಭಿಮಾನಿಗಳಾಗಲು ಸಾಧ್ಯ. ಮಕ್ಕಳಿಗೆಲ್ಲಾ ಶಿಕ್ಷಣ ಕೊಡಿಸಿ. ಪ್ರತಿಯೊಬ್ಬರೂ ಪ್ರತಿಭಾವಂತರೇ. ಅವಕಾಶ ಸಿಗುವುದಷ್ಟೆ ಮುಖ್ಯ. ಅವಕಾಶ ಸಿಕ್ಕರೆ ಎಲ್ಲರೊಳಗಿನ  ಪ್ರತಿಭೆ ಹೊರಗೆ ಬರುತ್ತದೆ ಎಂದರು.

ನಗದು ರಹಿತ ಆರೋಗ್ಯ ಕಾರ್ಡ್ : ಪೌರ ಕಾರ್ಮಿಕ ಸಮುದಾಯಕ್ಕೆ ನಗದು ರಹಿತ ಆರೋಗ್ಯ ಕಾರ್ಡ್ ನೀಡಲಾಗುವುದು‌. ಕಾರ್ಮಿಕರ ಸಿಂಧುತ್ವದ ಸಮಸ್ಯೆ ಬಗೆಹರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು.

ಪೌರ ಕಾರ್ಮಿಕರ ಸಂಘಟನೆ ಮತ್ತು ಹೋರಾಟದಲ್ಲಿ ನಾರಾಯಣ್ ಅವರ  ಪಾತ್ರ ದೊಡ್ಡದಿದೆ. ಪೌರ ಕಾರ್ಮಿಕ‌ ಸಮುದಾಯದಿಂದ ಬಂದು ಮೇಯರ್ ಆದವರಲ್ಲಿ ನಾರಾಯಣ್ ಅವರು ಮೊದಲಿಗರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾರಾಯಣ್ ಅವರು ಸರ್ಕಾರದ ಮುಂದೆ ಇಟ್ಟ ಪೌರ ಕಾರ್ಮಿಕರ ಸಮಸ್ಯೆಗಳಲ್ಲಿ ಹಲವನ್ನು ನಮ್ಮ ಸರ್ಕಾರ ಬಗೆಹರಿಸಿದೆ. ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ ಪಾಲಿಕೆಗಳಿಂದಲೇ ಸಂಬಳ ಪಾವತಿಸುವ ವ್ಯವಸ್ಥೆ ಜಾರಿಗೆ ಮಾಡಿದ್ದು ನಮ್ಮ ಸರ್ಕಾರ. ಮೈಸೂರಿನಲ್ಲಿ 524 ಮನೆಗಳನ್ನು ಕೊಡಿಸುವಲ್ಲಿ, ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಕಲ್ಪಿಸಿ ಒಂದು ಮನೆಗೆ 6.5 ಲಕ್ಷ ರೂಪಾಯಿ ಹಣ ಕೊಡ್ತಾ ಇರುವುದು ನಮ್ಮ ಸರ್ಕಾರ ಮಾತ್ರ ಎಂದರು.

ಪೌರ ಕಾರ್ಮಿಕರ ಸಂಬಳವನ್ನು 7 ಸಾವಿರದಿಂದ 17 ಸಾವಿರಕ್ಕೆ ಏರಿಸಿದ್ದು ಇದೇ ಸಿದ್ದರಾಮಯ್ಯ ಎಂದರು. ನೀವೆಲ್ಲಾ ಈಗ ಕಷ್ಟ ಪಟ್ಟು ಶುಚಿತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮಕ್ಕಳೂ ಇದೇ ಕೆಲಸ ಮಾಡಬಾರದು. ನಿಮ್ಮ ಮಕ್ಕಳು ಇತರೆ ಕೆಲಸಗಳಿಗೆ ಹೋಗಬೇಕು. ಆ ರೀತಿ ನೀವು ಬೆಳೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಪ್ರತೀ ವರ್ಷ ಒಂದು ಸಾವಿರ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪೌರ ಕಾರ್ಮಿಕ ಸಮುದಾಯವೂ ವಿಶ್ವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

Bengaluru, May 7: Chief Minister Siddaramaiah made an important announcement on May 1st, Labor Day, that the services of municipal workers will be made permanent. He spoke at the inauguration of the 25th anniversary of the Municipal Workers’ Association and the awareness program for the municipal workers’ community held at the Palace Grounds on April 7.

soraba | Soraba - Government school compound room construction: Minister's hard work draws attention! soraba | ಸೊರಬ - ಸರ್ಕಾರಿ ಶಾಲೆ ಕಾಂಪೌಂಡ್ ಕೊಠಡಿ ನಿರ್ಮಾಣ : ಗಮನ ಸೆಳೆದ ಸಚಿವರ ಶ್ರಮದಾನ! Previous post soraba | ಸೊರಬ – ಸರ್ಕಾರಿ ಶಾಲೆ ಕಾಂಪೌಂಡ್, ಕೊಠಡಿ ನಿರ್ಮಾಣ : ಗಮನ ಸೆಳೆದ ಸಚಿವರ ಶ್ರಮದಾನ!
shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 8 ರ ತರಕಾರಿ ಬೆಲೆಗಳ ವಿವರ